ನವದೆಹಲಿ:ಹಿಮಾಚಲಪ್ರದೇಶ, ಕರ್ನಾಟಕ ವಿಧಾನಸಭೆ ಸೋಲಿನ ಬಳಿಕ ಬಿಜೆಪಿಯಲ್ಲಿ ಹೊಸ ಮನ್ವಂತರ ಶುರುವಾಗಿದೆ. 17 ಕ್ಕೂ ಹೆಚ್ಚು ವಿಪಕ್ಷಗಳು ಒಗ್ಗಟ್ಟು ಪ್ರದರ್ಶಿಲು ಮುಂದಾಗಿರುವುದು ಬಿಜೆಪಿಯ ನಾಯಕತ್ವವನ್ನು ಬಡಿದೆಬ್ಬಿಸಿದೆ. ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಪಕ್ಷ ಉತ್ತಮ ಸಾಧನೆ ಮಾಡಲು ಈಗಿನಿಂದಲೇ ತಯಾರಿ ನಡೆಸಲು ಸೂಚಿಸಲಾಗಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿ ಪ್ರಧಾನಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ನೇತೃತ್ವದಲ್ಲಿ 5 ಗಂಟೆಗಳ ಕಾಲ ಸಭೆ ನಡೆಸಲಾಗಿದೆ.
ಪಕ್ಷದ ಯೋಜನೆ ಏನು?:ಈ ಸಭೆಯಲ್ಲಿ ಪಕ್ಷ ಸಂಘಟನೆಗಾಗಿ ನಿರ್ದಿಷ್ಟ ಕಾರ್ಯತಂತ್ರವನ್ನು ರೂಪಿಸಿದೆ. ದೇಶವನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಉತ್ತರ, ದಕ್ಷಿಣ ಮತ್ತು ಪೂರ್ವ ವಲಯವನ್ನಾಗಿ ಗುರುತಿಸಲಾಗಿದೆ. ಇದು ಪಕ್ಷದ ಕಾರ್ಯಚಟುವಟಿಕೆಯನ್ನು ಸುಗಮಗೊಳಿಸುವ ಮತ್ತು ಚುನಾವಣೆಯ ಪೂರ್ವದಲ್ಲಿ ಪರಿಣಾಮಕಾರಿಯಾಗಿ ಸಮನ್ವಯತೆಯನ್ನು ಸಾಧಿಸಲು ಸಹಕಾರಿಯಾಗಲಿದೆ. ಇದಕ್ಕಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ಇತರ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ.
ಪ್ರಧಾನಿ ಮೋದಿ ಸಲಹೆಯೇನು?:ರಣತಂತ್ರಗಳ ಜೊತೆಗೆ ಸಮಾಜದಲ್ಲಿನ ವರ್ಗಗಳ ಅಭಿವೃದ್ಧಿಯೂ ಪ್ರಮುಖ ಅಸ್ತ್ರ ಎಂಬುದನ್ನು ಪ್ರಧಾನಿ ಮೋದಿ ಅವರು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ದಲಿತರು, ಹಿಂದುಳಿದವರು ಮತ್ತು ಹಲವು ವರ್ಗಗಳ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡುವಂತೆ ಸಚಿವರುಗಳಿಗೆ ಪ್ರಧಾನಿ ಸಲಹೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದುಳಿದ ವರ್ಗಗಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಸಲಹೆ ಬಂದಿದೆ.
ಪೂರ್ವ ವಲಯದ ಚಟುವಟಿಕೆಗಳು:ಮೂರು ವಲಯಗಳಲ್ಲಿ ಒಂದಾಗಿ ಗುರುತಿಸಿರುವ ಪೂರ್ವದಲ್ಲಿ ಜುಲೈ 6, 7, ಮತ್ತು 8 ರಂದು ಸರಣಿ ಸಭೆ ನಡೆಯಲಿವೆ. ಪ್ರತಿ ದಿನ ನಿರ್ದಿಷ್ಟ ಪ್ರದೇಶಕ್ಕೆ ಅನುಗುಣವಾಗಿ ಚರ್ಚೆ ಮಾಡಬೇಕು. ಮೊದಲ ಸಭೆ ಜುಲೈ 6 ರಂದು ಗುವಾಹಟಿಯಲ್ಲಿ ನಡೆಯಲಿದೆ. ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸೋಂ, ಸಿಕ್ಕೀಂ, ಅರುಣಾಚಲ ಪ್ರದೇಶ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ ಮತ್ತು ತ್ರಿಪುರಾ ರಾಜ್ಯಗಳಿಗೆ ಇದು ಕೇಂದ್ರೀಕೃತವಾಗಿರುತ್ತದೆ.