ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನ್ನ ವಿಚಾರಣೆಯನ್ನು ಫೆಬ್ರವರಿ ಕೊನೆಯ ವಾರದವರೆಗೆ ಮುಂದೂಡುವಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭಾನುವಾರ ಮನವಿ ಮಾಡಿದ್ದಾರೆ. ತಾವು ದೆಹಲಿಯ ಬಜೆಟ್ ಸಿದ್ಧತೆಯಲ್ಲಿ ತೊಡಗಿರುವುದರಿಂದ ವಿಚಾರಣೆಯನ್ನು ಮುಂದೂಡುವಂತೆ ಅವರು ಕೋರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಸಿದ ಸುಮಾರು ಮೂರು ತಿಂಗಳ ನಂತರ ಸಿಸೋಡಿಯಾ ಅವರನ್ನು ಭಾನುವಾರ ವಿಚಾರಣೆಗೆ ಕರೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಇನ್ನಿತರ ಆರೋಪಿಗಳ ವಿರುದ್ಧ ತನಿಖೆ ಇನ್ನು ನಡೆಯುತ್ತಿರುವುದರಿಂದ ಇವರನ್ನು ಚಾರ್ಜ್ ಶೀಟ್‌ನಲ್ಲಿ ಆರೋಪಿ ಎಂದು ಹೆಸರಿಸಲಾಗಿಲ್ಲ.
ದೆಹಲಿಯ ಬಜೆಟ್ ಅನ್ನು ಅಂತಿಮಗೊಳಿಸುವಲ್ಲಿ ನಾನು ನಿರತನಾಗಿದ್ದೇನೆ ಮತ್ತು ಇದು ಬಹಳ ಮಹತ್ವದ ಸಮಯವಾಗಿದೆ. ಹೀಗಾಗಿ ನಾನು ಫೆಬ್ರವರಿ ಕೊನೆಯ ವಾರದ ನಂತರ ವಿಚಾರಣೆಗೆ ಹಾಜರಾಗುವುದಾಗಿ ಸಿಬಿಐಗೆ ಪತ್ರ ಬರೆದಿದ್ದೇನೆ ಎಂದು ಸಿಸೋಡಿಯಾ ಹೇಳಿದ್ದಾರೆ. ಸಮಯಕ್ಕೆ ಸರಿಯಾಗಿ ಬಜೆಟ್ ಮಂಡಿಸುವುದು ಹಣಕಾಸು ಸಚಿವನಾಗಿ ನನ್ನ ಕರ್ತವ್ಯವಾಗಿದೆ ಮತ್ತು ಅದಕ್ಕಾಗಿ 24 ಗಂಟೆಯೂ ಶ್ರಮಿಸುತ್ತಿದ್ದೇನೆ. ಫೆಬ್ರವರಿ ಕೊನೆಯ ವಾರದ ನಂತರ ಬಂದು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ನೀಡುವಂತೆ ಸಿಬಿಐಗೆ ಮನವಿ ಮಾಡಿದ್ದೇನೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಆಮ್ ಆದ್ಮಿ ಪಕ್ಷದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ಸಿಸೋಡಿಯಾ ಅಬಕಾರಿ ಇಲಾಖೆಯ ಉಸ್ತುವಾರಿಯನ್ನೂ ವಹಿಸಿಕೊಂಡಿದ್ದರು. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಈ ಹಿಂದೆ ಅಕ್ಟೋಬರ್ 17 ರಂದು ವಿಚಾರಣೆ ನಡೆಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆ ಮತ್ತು ಬ್ಯಾಂಕ್ ಲಾಕರ್‌ಗಳನ್ನು ಸಹ ಶೋಧಿಸಲಾಗಿತ್ತು.