ನವದೆಹಲಿ: "ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರದಲ್ಲಿ ವಿದೇಶಿ ಕೈಗಳು ಕೆಲಸ ಮಾಡಿರುವ ಬಗ್ಗೆ ತಳ್ಳಿ ಹಾಕುವಂತಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಸಕ್ರಿಯವಾಗಿರುವ ವಿವಿಧ ದಂಗೆಕೋರ ಗುಂಪುಗಳಿಗೆ ಚೀನಾ ನೆರವು ನೀಡುತ್ತಿರುವುದೇ ಈ ಅನುಮಾನಕ್ಕೆ ಕಾರಣ" ಎಂದು ಭಾರತದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಹೇಳಿದರು.
ಶುಕ್ರವಾರ ನವದೆಹಲಿಯ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ನಲ್ಲಿ ನಡೆದ 'ರಾಷ್ಟ್ರೀಯ ಭದ್ರತಾ ದೃಷ್ಟಿಕೋನಗಳು' ಕುರಿತ ಚರ್ಚೆಯಲ್ಲಿ ಪಾಲ್ಗೊಂಡು, ಜ.ನರವಣೆ ಚೀನಾ ದೇಶವನ್ನು ಪರೋಕ್ಷವಾಗಿ ಉಲ್ಲೇಖಿಸಿ ಈ ಹೇಳಿಕೆ ನೀಡಿದರು.
ದೇಶದಲ್ಲಿ ಆಂತರಿಕ ಭದ್ರತೆ ಬಹಳ ಮುಖ್ಯ. ಅಸ್ಥಿರತೆ ಎನ್ನುವಂಥದ್ದು ನಮ್ಮ ನೆರೆ ರಾಷ್ಟ್ರದಲ್ಲಿ ಮಾತ್ರವಲ್ಲ, ನಮ್ಮ ಗಡಿ ರಾಜ್ಯಗಳಲ್ಲೇ ಇದ್ದರೂ ಅದು ನಮ್ಮ ಒಟ್ಟಾರೆ ರಾಷ್ಟ್ರೀಯ ಭದ್ರತೆಗೆ ಕೆಡುಕುಂಟು ಮಾಡುತ್ತದೆ ಎಂದು ಎಚ್ಚರಿಸಿದರು. ಇದರ ಜೊತೆಗೆ ಈಶಾನ್ಯ ರಾಜ್ಯದಲ್ಲಿ ಶಾಂತಿ ಪುನಃಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ಹಿಂಸಾಚಾರದಿಂದ ಕೆಲವು ಘಟಕಗಳು ಪ್ರಯೋಜನ ಪಡೆಯುತ್ತಿವೆ. ಹೀಗಾಗಿ ಅವರು ಶಾಂತಿ ಮರುಸ್ಥಾಪಿಸಲು ಬಯಸುವುದಿಲ್ಲ ಎಂದು ಅವರು ದೂರಿದರು.
ಮಲ್ಲಿಕಾರ್ಜುನ ಖರ್ಗೆ ಆಗ್ರಹ : ಸಂಸತ್ತಿನಲ್ಲಿ ಪ್ರತಿಪಕ್ಷಗಳ ಸಭೆಯ ನಂತರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿ, "ಪ್ರಧಾನಿ ಮೋದಿ ತಮ್ಮ ಅಹಂ ಬದಿಗಿಟ್ಟು ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಸಂಸತ್ತಿನ ಉಭಯ ಸದನಗಳಲ್ಲಿ ಸಮಗ್ರ ಹೇಳಿಕೆ ನೀಡಬೇಕು" ಎಂದು ಒತ್ತಾಯಿಸಿದ್ದರು. ಕಳೆದ 83 ದಿನಗಳಿಂದ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಅಮಾನವೀಯ ಘಟನೆಗಳು ವರದಿಯಾಗುತ್ತಿವೆ. ಮಣಿಪುರ ಪರಿಣಾಮಗಳು ಇತರ ರಾಜ್ಯಗಳಿಗೂ ಹರಡುತ್ತಿರುವಂತೆ ತೋರುತ್ತಿದೆ. ಇದು ದೇಶದ ಸೂಕ್ಷ್ಮ ಗಡಿ ರಾಜ್ಯಗಳಿಗೆ ಒಳ್ಳೆಯದಲ್ಲ. ಹೀಗಾಗಿ ಸಮಸ್ಯೆ ಪರಿಹರಿಸಿ ರಾಜ್ಯ ಸಾಮಾನ್ಯ ಸ್ಥಿತಿಗೆ ಮರಳಲು ಮೋದಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದರು.
ಇದನ್ನೂ ಓದಿ:Manipur violence: ಮಣಿಪುರದಲ್ಲಿ ಪ್ರತಿಪಕ್ಷಗಳ 'ಇಂಡಿಯಾ' ನಿಯೋಗ; ಸಂತ್ರಸ್ತರ ಅಹವಾಲು ಆಲಿಕೆ, ಇಂದೂ ಮುಂದುವರಿಕೆ