ಡೆಹ್ರಾಡೂನ್ (ಉತ್ತರಾಖಂಡ):ಲೈಂಗಿಕ ಕಿರುಕುಳ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಉತ್ತರಾಖಂಡದ ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀರಿನ ತೊಟ್ಟಿಯ ಮೇಲೆ ನಿಂತುಕೊಂಡು ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಅವರ ಸೊಸೆ ಆರೋಪಿಸಿದ ಕೆಲವೇ ದಿನಗಳಲ್ಲಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಆತ್ಮಹತ್ಯೆಗೂ ಮುನ್ನ ಪೊಲೀಸರಿಗೆ ಕರೆ ಮಾಡಿದ್ದ ಬಹುಗುಣ, ನನ್ನ ಸೊಸೆಯ ಆರೋಪ ನನಗೆ ಬೇಸರ ತಂದಿದೆ. ಹಾಗಾಗಿ ತಾವು ಆತ್ಮಹತ್ಯೆಗೆ ಯೋಚಿಸಿರುವುದಾಗಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಕೂಡಲೇ ಪೊಲೀಸರು ಅವರ ಮನೆಯತ್ತ ಧಾವಿಸಿದ್ದರು. ಆದರೆ, ಪೊಲೀಸರು ಬಂದ ಬಳಿಕ, ಅಕ್ಕಪಕ್ಕದ ಮನೆಯವರು ಹಾಗೂ ಇತರರ ಕಣ್ಣೆದುರೇ ಅವರು ತಮಗೆ ತಾವು ಗುಂಡು ಹಾರಿಸಿಕೊಂಡಿದ್ದಾರೆ. ಈ ಭಯಾನಕ ದೃಶ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಅವರ ಸೊಸೆಯ ದೂರಿನ ಮೇರೆಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ರಾಜೇಂದ್ರ ಬಹುಗುಣ ವಿರುದ್ಧ ದೂರು ದಾಖಲಾಗಿತ್ತು. ಇದಲ್ಲದೇ ನೆರೆಮನೆಯ ಸವಿತಾ ಎಂಬುವರಿಂದಲೂ ಮೃತ ವ್ಯಕ್ತಿಯ ವಿರುದ್ಧ ಮತ್ತೊಂದು ಪ್ರಕರಣ ಕೂಡ ದಾಖಲಾಗಿತ್ತು. ತನ್ನ ಅತ್ತೆಯೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ನಿಂದನೆ, ಬೆದರಿಕೆ ಮತ್ತು ಹಲ್ಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದರು.