ಪಾಟ್ನಾ(ಬಿಹಾರ): ಮಗಳನ್ನು ಕೊಲ್ಲಲು ಬಾಡಿಗೆ ಹಂತಕರನ್ನು ನೇಮಿಸಿದ ಆರೋಪದ ಮೇಲೆ ಬಿಹಾರದ ಮಾಜಿ ಶಾಸಕರನ್ನು ಬಂಧಿಸಲಾಗಿದೆ. ಮಾಜಿ ಶಾಸಕ ಸುರೇಂದ್ರ ಶರ್ಮಾ ‘ಮರ್ಯಾದಾ ಹತ್ಯೆ’ಗಾಗಿ 20 ಲಕ್ಷ ರೂಪಾಯಿ ನೀಡಿರುವುದು ತನಿಖೆ ವೇಳೆ ಬಯಲಾಗಿದೆ ಎಂದು ನಗರ (ಪೂರ್ವ) ಪೊಲೀಸ್ ಅಧೀಕ್ಷಕ ಪ್ರಮೋದ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಗಳು ಅನ್ಯ ಜಾತಿಯ ವ್ಯಕ್ತಿ ಮದುವೆಯಾದ ಬಗ್ಗೆ ಮಾಜಿ ಶಾಸಕರಿಗೆ ಸಮಾಧಾನವಿರಲಿಲ್ಲ. ಜುಲೈ 1-2ರ ಮಧ್ಯರಾತ್ರಿ ಶ್ರೀಕೃಷ್ಣಪುರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಜಿ ಶಾಸಕರ ಮಗಳನ್ನು ಕೊಲೆ ಮಾಡಲು ಯತ್ನಿಸಲಾಗಿತ್ತು. ಅಪರಿಚಿತರು ತನ್ನ ಮೇಲೆ ಗುಂಡು ಹಾರಿಸಿದ್ದರು. ಗುರಿ ತಪ್ಪಿದ ನಂತರ ದಾಳಿಕೋರರು ಬೈಕ್ನಲ್ಲಿ ಪರಾರಿಯಾಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಓದಿ:ಪ್ರೀತಿಸಿದ ಯುವಕನ ಕೈ ಬಿಡದ ಯುವತಿ.. ತಂದೆಯಿಂದಲೇ ಮಗಳ ಮೇಲೆ ಚಾಕು ಇರಿತ
ಶನಿವಾರ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಯಿತು. ಗ್ಯಾಂಗ್ ಲೀಡರ್ ಅಭಿಷೇಕ್ ಅಲಿಯಾಸ್ ಛೋಟೆ ಸರ್ಕಾರ್ ಮತ್ತು ಆತನ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಈ ವೇಳೆ, 1990ರ ದಶಕದಲ್ಲಿ ತನ್ನ ಸ್ಥಳೀಯ ಜಿಲ್ಲೆ ಸರನ್‌ನಿಂದ ಅಸೆಂಬ್ಲಿ ಅವಧಿಯನ್ನು ಪೂರ್ಣಗೊಳಿಸಿದ ಶರ್ಮಾ ಬಗ್ಗೆ ಅಭಿಷೇಕ್ ಪೊಲೀಸರಿಗೆ ತಿಳಿಸಿದ್ದರು.
ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶರ್ಮಾ ಅವರಿಗೂ ಕ್ರಿಮಿನಲ್ ಇತಿಹಾಸವಿದೆ ಎನ್ನಲಾಗಿದೆ. ಸದ್ಯಕ್ಕೆ ಅವರು ಯಾವ ಪಕ್ಷದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ತಿಳಿದಿಲ್ಲ. ಅಭಿಷೇಕ್ ಮತ್ತು ಆತನ ಸಹಚರರಿಂದ ದೇಶಿ ನಿರ್ಮಿತ ಪಿಸ್ತೂಲ್‌ಗಳು, ಹಲವಾರು ಕಾರ್ಟ್ರಿಡ್ಜ್‌ಗಳು ಮತ್ತು ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.