ಹೈದರಾಬಾದ್: ಮಾಜಿ ಸಚಿವ ವೈಎಸ್ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುನೀಲ್ ಯಾದವ್ರಿಗೆ ಜಾಮೀನು ನೀಡದಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಜಾಮೀನು ಕೋರಿ ಆರೋಪಿ ಯಾದವ್ ತೆಲಂಗಾಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿಬಿಐ ಅರ್ಜಿ ಸಲ್ಲಿಸಿದ್ದು, ಜಾಮೀನು ನೀಡದಂತೆ ಕೋರಿದೆ. ಕೊಲೆ ಸಂಚಿನ ಕುರಿತು ಸಿಬಿಐ ಹೊಸ ವಿವರಗಳನ್ನು ಸಹ ಬಹಿರಂಗಪಡಿಸಿದೆ.
ವಿವೇಕ ಕೊಲೆಯಾಗುವ ಕೆಲವು ಗಂಟೆಗಳ ಮೊದಲು ಆರೋಪಿ ಸುನೀಲ್ ಯಾದವ್ ಅವರು ಕಡಪ ಸಂಸದ ಅವಿನಾಶ್ ರೆಡ್ಡಿ ಮತ್ತು ಭಾಸ್ಕರ್ ರೆಡ್ಡಿ ಅವರ ಮನೆಯಲ್ಲಿದ್ದ ಸಂಗತಿ ಬಹಿರಂಗವಾಗಿತ್ತು. ವಿವೇಕ ಹತ್ಯೆಗೆ ಕದಿರಿಯಿಂದ ಕೊಡಲಿ ತರಲು ಹೋಗಿದ್ದ ಚಾಲಕ ದಸ್ತಗಿರಿ ಬರುವಿಕೆಗಾಗಿ ಸುನೀಲ್ ಯಾದವ್ ಅವಿನಾಶ್ ಮನೆಯಲ್ಲಿ ಕಾಯುತ್ತಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಯೋಜನೆಯಂತೆ ಕೃತ್ಯ ಎಂದ ಸಿಬಿಐ: ಮಾರ್ಚ್ 14, 2019 ರಂದು, ವಿವೇಕಾ ಜೊತೆಗಿದ್ದ ಎರ್ರಗಂಗಿರೆಡ್ಡಿ ಅಂದು ಸಂಜೆ 6.14 ರಿಂದ 6.33 ರ ನಡುವೆ ಸುನೀಲ್‌ಗೆ ಎರಡು ಬಾರಿ ಕರೆ ಮಾಡಿದ್ದಾರೆ. ವಿವೇಕ ಹತ್ಯೆಯಾಗಿರುವ ಸುದ್ದಿ ಹೊರ ಬೀಳುವ ಮುನ್ನ ಆರೋಪಿ ಶಿವಶಂಕರರೆಡ್ಡಿ ಹಾಗೂ ಉಮಾಶಂಕರರೆಡ್ಡಿ ಕೂಡ ಅವಿನಾಶ್ ರೆಡ್ಡಿ ಮನೆಯಲ್ಲಿದ್ದರು. ಶಿವಶಂಕರರೆಡ್ಡಿ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವಿನಾಶ್ ರೆಡ್ಡಿ ಮತ್ತು ಆತನ ಹಿಂಬಾಲಕರು ನ್ಯಾಯಾಲಯಕ್ಕೆ ಬಂದು ಗಲಾಟೆ ಮಾಡಿರುವುದು ಸಿಬಿಐ ನ್ಯಾಯಾಲಯದ ಗಮನಕ್ಕೆ ತಂದಿದೆ. ಶಿವಶಂಕರರೆಡ್ಡಿಗೆ ಅವಿನಾಶ್ ರೆಡ್ಡಿ ಬೆಂಬಲ ನೀಡಿದ್ದು, ಅವರ ಹಿಂಬಾಲಕರು ಸಿಬಿಐ ತನಿಖೆಗೆ ಅಡೆತಡೆಗಳನ್ನು ಸೃಷ್ಟಿಸಿದ್ದಾರೆ ಎಂಬುದು ಬಹಿರಂಗವಾಗಿದೆ.
ಶಿವಶಂಕರರೆಡ್ಡಿ ಪುತ್ರನ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಅವಿನಾಶ್ ರೆಡ್ಡಿ ಹಾಗೂ ಉಪ ಮುಖ್ಯಮಂತ್ರಿ ಅವರ ಚಿತ್ರಗಳನ್ನು ಹಾಕಿಕೊಂಡು ತಮ್ಮ ರಾಜಕೀಯ ಪ್ರಭಾವವನ್ನು ಸಾರ್ವಜನಿಕರಿಗೆ ತಿಳಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಪ್ರಕರಣದಲ್ಲಿ ಅಪ್ರೂವರ್ ಆಗಿರುವ ದಸ್ತಗಿರಿ ಹೇಳಿಕೆ ಆಧರಿಸಿ ತನಿಖೆಯಲ್ಲಿ ಹಲವು ಅಂಶಗಳು ಬಹಿರಂಗವಾಗಿವೆ ಎಂದು ಸಿಬಿಐ ವಿವರಿಸಿದೆ. ಮಾರ್ಚ್ 14, 2019 ರಂದು ಸುನೀಲ್ ಯಾದವ್ ಅವಿನಾಶ್ ರೆಡ್ಡಿ ಅವರ ಮನೆಯಲ್ಲಿ ಕಾಯುತ್ತಿದ್ದರು. ರಾತ್ರಿ 9 ರಿಂದ 9.30ರ ನಡುವೆ ಮದ್ಯ ಸೇವಿಸಲು ವಿವೇಕಾ ಅವರ ಮನೆ ಬಳಿ ಬರುವಂತೆ ಸುನೀಲ್ ಯಾದವ್ ದಸ್ತಗಿರಿಗೆ ಕರೆ ಮಾಡಿದ್ದರು ಎನ್ನಲಾಗಿದೆ.