ಬಾರ್ಪೇಟಾ (ಅಸ್ಸೋಂ): ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್ಆರ್ಸಿ) ಕಾಯ್ದೆಯು ಸಾಕಷ್ಟು ಚರ್ಚೆ ಮತ್ತು ವಿವಾದಕ್ಕೂ ಕಾರಣವಾಗಿತ್ತು. ಎರಡು ವರ್ಷಗಳ ಹಿಂದೆ ಈ ಕಾಯ್ದೆಗಳ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಮತ್ತು ಹೋರಾಟಗಳು ನಡೆದಿದ್ದವು. ಇದೇ ವೇಳೆ, ಈ ಕಾಯ್ದೆಗಳು ಪರವಾಗಿಯೂ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಇದರಲ್ಲೂ ರಾಷ್ಟ್ರೀಯ ಪೌರತ್ವ ಕಾಯ್ದೆ (ಎನ್ಆರ್ಸಿ)ಯು ಈಶಾನ್ಯ ರಾಜ್ಯವಾದ ಅಸ್ಸೋಂದಲ್ಲಿ ಮೊದಲಿಗೆ ಜಾರಿಯಾಗಿದ್ದು, ಅನೇಕ ಜನರಿಗೆ ತಮ್ಮ ಪೌರತ್ವ ಸಾಬೀತು ಪಡಿಸುವಂತೆ ಸೂಚನೆ ನೀಡಲಾಗಿತ್ತು. ಇದೀಗ ಮತ್ತೊಬ್ಬ ಭಾರತೀಯ ಸೇನೆಯ ನಿವೃತ್ತ ಅಧಿಕಾರಿಗೂ ತಮ್ಮ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಆದೇಶಿಸಲಾಗಿದೆ.
ಇದನ್ನೂ ಓದಿ:ಪೌರತ್ವ ತಿದ್ದುಪಡಿ ಕಾಯ್ದೆಯನ್ನು ನಾವು ಜಾರಿಗೆ ತರುವುದಿಲ್ಲ: ಅಮಿತ್ ಶಾಗೆ ಪಿಣರಾಯಿ ತಿರುಗೇಟು
ಅಸ್ಸೋಂದ ಬಾರ್ಪೇಟಾ ಜಿಲ್ಲೆಯಲ್ಲಿ ನಿವೃತ್ತ ಸೇನಾಧಿಕಾರಿಯಾದ ಅಬ್ದುಲ್ ಹಮೀದ್ ಅವರಿಗೆ 'ಸಂಶಯಾಸ್ಪದ ನಾಗರಿಕ' ಎಂದು ಗುರುತನ್ನು ಟ್ಯಾಗ್ ಮಾಡಲಾಗಿದೆ. ಇದರಿಂದ 28 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ಅವರು ಅವಮಾನಕ್ಕೆ ಒಳಗಾಗುವಂತೆ ಆಗಿದೆ. ಭಾರತೀಯ ಪೌರತ್ವವನ್ನು ಸಾಬೀತುಪಡಿಸುವಂತೆ ತಮಗೆ ನೋಟಿಸ್ ಬಂದ ತಕ್ಷಣ ಅವರು ಆಶ್ಚರ್ಯಕ್ಕೂ ಒಳಗಾಗಿದ್ದಾರೆ. ಅಲ್ಲದೇ, ಈ ವಿಷಯವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸದಂತೆಯೂ ಮಾಜಿ ಸೇನಾಧಿಕಾರಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಯಾರು ಈ ಅಬ್ದುಲ್ ಹಮೀದ್?:ಭಾರತೀಯ ಸೇನೆಯಲ್ಲಿ ಸುದೀರ್ಘವಾದ 28 ವರ್ಷಗಳ ಕಾಲ ಸೇವೆಯನ್ನು ಬಾರ್ಪೇಟಾ ಜಿಲ್ಲೆಯ ಅಬ್ದುಲ್ ಹಮೀದ್ ಸಲ್ಲಿಸಿದ್ದಾರೆ. 1992ರಲ್ಲಿ ಸೇನೆಗೆ ಸೇರ್ಪಡೆಗೊಂಡಿದ್ದ ಇವರು, 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧದಲ್ಲಿಯೂ ಹೋರಾಡಿದ್ದಾರೆ. ಸದ್ಯ ಸೇನೆಯಿಂದ ಅಬ್ದುಲ್ ಹಮೀದ್ ನಿವೃತ್ತಿ ಹೊಂದಿದ್ದಾರೆ. ಇದೀಗ ಅಬ್ದುಲ್ ಹಮೀದ್ ಅವರಿಗೆ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಬಾರ್ಪೇಟಾದ ವಿದೇಶಿ ನ್ಯಾಯಮಂಡಳಿ ನೋಟಿಸ್ ನೀಡಿದೆ. 2003ರಲ್ಲಿ ಬಾರ್ಪೇಟಾ ಗಡಿ ಪೊಲೀಸರು ದಾಖಲಿಸಿದ ಪ್ರಕರಣದ ಆಧಾರದ ಮೇಲೆ ಈ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.