ಲಂಡನ್: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2,000 ರುಪಾಯಿ ಮುಖಬೆಲೆಯ ನೋಟನ್ನು ಚಲಾವಣೆಯಿಂದ ಹಿಂಪಡೆದ ನಿರ್ಧಾರದ ಕುರಿತು ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಎರಡು ಸಾವಿರ ರು. ನೋಟು ಹಿಂತೆಗೆದುಕೊಳ್ಳುವ ಕೇಂದ್ರದ ನಿರ್ಧಾರವು 'ಒಳ್ಳೆಯ ಕ್ರಮ' ಎಂದಿದ್ದಾರೆ.
ಈ ಕುರಿತು ತಮ್ಮ ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಅವರು," ಈಗಾಗಲೇ ದೇಶದಲ್ಲಿ ನಡೆದ ಹಲವಾರು ದಾಳಿಗಳಲ್ಲಿ 2000 ರುಪಾಯಿ ನೋಟುಗಳನ್ನು ಹೆಚ್ಚು ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಹಣ ಸಂಗ್ರಹಿಸಲು 2000 ರುಪಾಯಿ ನೋಟು ಬಳಕೆಯಾಗುತ್ತಿದ್ದು, ವಿನಿಮಯ ಮಾಧ್ಯಮವಾಗಿ ಈ ನೋಟು ಗಣನೀಯವಾಗಿ ಕುಸಿತ ಕಂಡಿದೆ. ವಿನಿಮಯ ಮಾಧ್ಯಮವಾಗಿ 2,000 ರುಪಾಯಿ ನೋಟಿನ ಬಳಕೆ ಕಡಿಮೆಯಾಗುತ್ತಿರುವುದರಿಂದ ಪ್ರಾಥಮಿಕವಾಗಿ ಹಣ ಸಂಗ್ರಹಣೆಗೆ ಬಳಸಿಕೊಳ್ಳಲಾಗುತ್ತಿದೆ" ಎಂದಿದ್ದಾರೆ.
2,000 ರುಪಾಯಿ ನೋಟು ಹಿಂಪಡೆಯುವಿಕೆ ಈ ಕೆಳಗಿನ ಕಾರಣಗಳಿಂದಾಗಿ ಸಾರ್ವಜನಿಕರ ಮೇಲೆ ಗಮನಾರ್ಹ ಅನಾನುಕೂಲತೆ ಉಂಟು ಮಾಡುವುದಿಲ್ಲ ಎಂದು ಕೃಷ್ಣಮೂರ್ತಿ ಸುಬ್ರಮಣಿಯನ್ ಅಭಿಮತ.
1) ಬಳಕೆ ಕಡಿಮೆ:ಪ್ರಸ್ತುತ 2,000 ರುಪಾಯಿ ನೋಟುಗಳು ಚಲಾವಣೆಯಲ್ಲಿರುವ ಕರೆನ್ಸಿಯ (CiC) ಕೇವಲ 10.8 ಪ್ರತಿಶತವನ್ನು ಮಾತ್ರ ಒಳಗೊಂಡಿವೆ. ಹೀಗಾಗಿ, ಈ ನೋಟುಗಳು ವಿನಿಮಯ ಮಾಧ್ಯಮವಾಗಿ ವ್ಯಾಪಕವಾಗಿ ಬಳಕೆಯಾಗುತ್ತಿಲ್ಲ. ಇದರ ಜೊತೆಗೆ, ಜನಸಾಮಾನ್ಯರು ನಿತ್ಯದ ಬದುಕಿನಲ್ಲಿ 2,000 ರುಪಾಯಿ ನೋಟುಗಳನ್ನು ಬಳಸುವ ಸಾಧ್ಯತೆಗಳು ಕಡಿಮೆ.
2) ಡಿಜಿಟಲ್ ಪಾವತಿಗಳಲ್ಲಿ ಏರಿಕೆ:ಆರ್ಥಿಕ ವಹಿವಾಟುಗಳಿಗೆ ಡಿಜಿಟಲ್ ಪಾವತಿ ವಿಧಾನಗಳ ಅಳವಡಿಕೆಯು ಗಮನಾರ್ಹವಾಗಿ ಏರಿಕೆಯಾಗುತ್ತಿದೆ. ದೇಶದಲ್ಲಿ ಬಹುತೇಕರು ನಿತ್ಯದ ವ್ಯವಹಾರಗಳಿಗೆ ಡಿಜಿಟಲ್ ವಹಿವಾಟುಗಳನ್ನು (ಪೇಟಿಎಂ, ಫೋನ್‌ಪೇ, ಗೂಗಲ್‌ಪೇ) ಅವಲಂಬಿಸುತ್ತಿದ್ದಾರೆ. ಪರಿಣಾಮವಾಗಿ, ಭೌತಿಕ ಕರೆನ್ಸಿ ನೋಟುಗಳ ಪಾತ್ರ ಅದರಲ್ಲೂ ವಿಶೇಷವಾಗಿ 2,000 ದ ನೋಟುಗಳು ಕುಸಿದಿವೆ.