ನವದೆಹಲಿ:ಅಸ್ಸೊಂ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮುಗಿದ ಕೆಲವೇ ಗಂಟೆಗಳ ನಂತರ ಬಿಜೆಪಿ ಶಾಸಕರ ಖಾಸಗಿ ವಾಹನದಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (ಇವಿಎಂ) ಸಾಗಿಸಲಾಗುತ್ತಿದೆ ಎಂಬ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದಂತೆ ಕಾಂಗ್ರೆಸ್ ಮುಖಂಡರು ಬಿಜೆಪಿ ಹಾಗೂ ಚುನಾವಣೆ ಆಯೋಗದ ವಿರುದ್ಧ ಹರಿಹಾಯ್ದಿದ್ದಾರೆ.
ಎಎಸ್ 10 ಬಿ 0022 ನೋಂದಣಿ ಸಂಖ್ಯೆ ಹೊಂದಿರುವ ವಾಹನದ ಹಿಂಭಾಗದ ಆಸನದ ಮೇಲೆ ಇವಿಎಂ ಕಂಡು ಬಂದಿದೆ. ಅಸ್ಸೊಂ ಶಾಸಕ ಮತ್ತು ಪಥರ್ಕಂಡಿಯ ಬಿಜೆಪಿ ಅಭ್ಯರ್ಥಿ ಕೃಷ್ಣೇಂಡು ಪಾಲ್ ಅವರಿಗೆ ಈ ವಾಹನ ಸೇರಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಚುನಾವಣೆ ಆಯೋಗ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿಯ ನಿಯತ್ತು ಕೆಟ್ಟು ಹೋಗಿದೆ, ಪ್ರಜಾಪ್ರಭುತ್ವ ದುಃಸ್ಥಿತಿಯಲ್ಲಿದೆ (ಇಸಿ ಕಿ ಗಾಡಿ ಖರಾಬ್, ಭಾಜಪಾ ಕಿ ನಿಯತ್ ಖರಾಬ್, ಲೋಕತಂತ್ರ ಕೀ ಹಾಲತ್ ಖರಾಬ್) ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಅಸ್ಸೋಂ ಮೂಲದ ಪತ್ರಕರ್ತ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ ಕೂಡಲೇ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರತಿಪಕ್ಷಗಳು ಮತದಾನದ ನಡೆದ ರಾಜ್ಯಗಳಲ್ಲಿ ಇವಿಎಂಗಳ ನಿರ್ವಹಣೆ ಕುರಿತು ಪ್ರಶ್ನೆಗಳನ್ನು ಎತ್ತಿದವು.