ಪ್ರಯಾಗ್ರಾಜ್ (ಉ.ಪ್ರ):ಅಲಹಾಬಾದ್ನ ಸಂಗಮ್ನಲ್ಲಿ 45 ಕಿ.ಮೀಟರ್ನಷ್ಟು ಉದ್ದದ ಪ್ರದೇಶದಲ್ಲಿ ಸರಸ್ವತಿ ನದಿ ಹರಿವಿಕೆಯ ಕುರುಹು ಇದೀಗ ಸಾಧು ಸಂತರು, ನಿವಾಸಿಗಳ ಕುತೂಹಲಕ್ಕೆ ಕಾರಣವಾಗಿದೆ. ಸುಮಾರು 12,000 ವರ್ಷಗಳ ಹಿಂದೆ ಇಲ್ಲಿ ಸರಸ್ವತಿ ನದಿ ಹರಿಯುತ್ತಿತ್ತು ಎಂದು ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ (NGRI) ವಿಜ್ಞಾನಿಗಳು ನಡೆಸಿರುವ ಸರ್ವೆಯಲ್ಲಿ ಬಯಲಾಗಿದೆ. ವಿದ್ಯುತ್ಕಾಂತೀಯ ಸಮೀಕ್ಷೆಯಲ್ಲಿ ಇದು 12,000 ವರ್ಷ ಹಳೆಯದಾದ ಪವಿತ್ರ ನದಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಋಗ್ವೇದದಲ್ಲಿ ಉಲ್ಲೇಖಿಸಲಾಗಿರುವ ವಿವರಣೆಯೂ ಈ ನದಿಯ ಕುರಿತಾಗಿದೆ. ಸಂಗಮ್ ಸ್ಥಳದಲ್ಲಿ ಹರಿಯುವ ಸರಸ್ವತಿ ನದಿಯು 45 ಕಿ.ಮೀ ಉದ್ದವಿದ್ದು, ನಾಲ್ಕು ಕಿಲೋಮೀಟರ್ ಅಗಲ ಮತ್ತು 15 ಮೀಟರ್ ಆಳವನ್ನು ಹೊಂದಿದೆ. ಸಂಗಮ ಸ್ಥಳವು ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ಮಹಾನದಿಗಳ ಕೂಡುವಿಕೆಯ ಸ್ಥಳವಾಗಿದೆ. ಆದರೆ, ಸರಸ್ವತಿ ನದಿ ಸಾವಿರಾರು ವರ್ಷಗಳ ಹಿಂದೆಯೇ ಬತ್ತಿಹೋಗಿ ಕೇವಲ ಕುರುಹುಗಳ ಮೂಲಕ ತನ್ನ ಇರುವಿಕೆಗೆ ಸಾಕ್ಷಿಯಾಗಿದೆ.