ಹೈದರಾಬಾದ್ :ಮುಂದಿನ ತಿಂಗಳು ನಡೆಯಲಿರುವ ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಗೆ ಪ್ರಚಾರ ನಡೆಸುತ್ತಿರುವ ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಎಐಐಎಂ ನಾಯಕ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ ವಿರುದ್ಧ ಆಕ್ರಮಣಕಾರಿ ವಾಗ್ದಾಳಿ ನಡೆಸಿದರು.
ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಇಬ್ಬರೂ ವಿಭಜಕ ಮತ್ತು ಕೋಮುವಾದಿ ರಾಜಕೀಯದ ಆಟ ಆಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಅವಕಾಶ ನೀಡುತ್ತಿದ್ದಾರೆ ಹೊರತು ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.
'ಪ್ರೀತಿ ವೈಯಕ್ತಿಕ, ಧರ್ಮದ ಹೆಸರಲ್ಲಿ ರಾಜಕೀಯಗೊಳಿಸಬೇಡಿ'
ಒವೈಸಿಗೆ ಹಾಕುವ ಪ್ರತಿ ಮತಗಳು ಭಾರತದ ವಿರುದ್ಧದ ಮತವಾಗಲಿದೆ. ಭಾರತದ ಎಲ್ಲವೂ ಇದರ ಮೇಲೆ ನಿಂತಿದೆ. ಅವರು (ಅಸಾದುದ್ದೀನ್ ಒವೈಸಿ) ಮೊಹಮ್ಮದ್ ಅಲಿ ಜಿನ್ನಾ ಮಾತನಾಡಿದಂತೆ ಕ್ರೋಧೋನ್ಮತ್ತ ಇಸ್ಲಾಂ ಧರ್ಮ, ಪ್ರತ್ಯೇಕತಾವಾದ ಮತ್ತು ಉಗ್ರವಾದದ ಭಾಷೆಯಲ್ಲಿ ಮಾತನಾಡುತ್ತಾರೆ. ಪ್ರತಿಯೊಬ್ಬ ಭಾರತೀಯರು ಒವೈಸಿ ಸಹೋದರರ ವಿಭಜಕ ಮತ್ತು ಕೋಮುವಾದಿ ರಾಜಕೀಯದ ವಿರುದ್ಧ ನಿಲ್ಲಬೇಕು ಎಂದರು.
ಡಿಸೆಂಬರ್ 1ರಂದು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯು ದಕ್ಷಿಣ ಭಾರತಕ್ಕೆ ಬಿಜೆಪಿಯ ಹೆಬ್ಬಾಗಿಲು. ಇಂದು ಹೈದರಾಬಾದ್ ಅನ್ನು ಬದಲಾಯಿಸಿ, ನಾಳೆ ತೆಲಂಗಾಣವನ್ನು ಬದಲಾಯಿಸಿ. ನಂತರ ದಕ್ಷಿಣ ಭಾರತವನ್ನು ಬದಲಾಯಿಸಿ. ಇಡೀ ರಾಷ್ಟ್ರವು ಹೈದರಾಬಾದ್ ಅನ್ನೇ ಎದುರು ನೋಡುತ್ತಿದೆ ಎಂದು ಹೇಳಿದರು.
ಅಕ್ಬರುದ್ದೀನ್ ಮತ್ತು ಅಸಾದುದ್ದೀನ್ ಒವೈಸಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವುದು ನಗು ತರುತ್ತದೆ. ಹಳೆಯ ಹೈದರಾಬಾದ್‌ನಲ್ಲಿ ಅಭಿವೃದ್ಧಿ ಅಥವಾ ಹೊಸ ಮೂಲಸೌಕರ್ಯ ಯೋಜನೆಗೆ ಅವಕಾಶ ನೀಡಿಲ್ಲ. ಅವರು ಅನುಮತಿಸಿದ ಏಕೈಕ ವಿಷಯವೆಂದರೆ ರೋಹಿಂಗ್ಯಾ ಮುಸ್ಲಿಮರು ಎಂದು ದೂರಿದರು.
ಹೈದರಾಬಾದ್ ಅನ್ನು ಇಸ್ತಾಂಬುಲ್ ಮಾಡುವ ಭರವಸೆ ನೀಡಿದ್ದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರನ್ನು ಅಪಹಾಸ್ಯ ಮಾಡಿ, ಎಐಐಎಂಐಎಂನೊಂದಿಗೆ ಒಪ್ಪಂದ ಮಾಡಿಕೊಂಡು ಪಾಕಿಸ್ತಾನದ ಹೈದರಾಬಾದ್ ಮಾಡಲು ಬಯಸಿದ್ದಾರೆ ಎಂದರು.