ಡೆಹ್ರಾಡೂನ್(ಉತ್ತರಾಖಂಡ): ಭೂಕಂಪನದಿಂದ ಬಿರುಕು ಬಿಟ್ಟಿರುವ ಜೋಶಿಮಠದಲ್ಲಿನ ಹೆಚ್ಚಿನ ಮನೆಗಳು, ಕಟ್ಟಡಗಳು ಮತ್ತು ರಸ್ತೆಗಳ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿವೆ. ಅಸುರಕ್ಷಿತ ಕಟ್ಟಡಗಳ ಮೇಲೆ ರೆಡ್ ಕ್ರಾಸ್ಗಳನ್ನು ಹಾಕಲಾಗಿದ್ದು, ಜನರು ಅಪಾಯವನ್ನು ಎದುರುನೋಡುತ್ತಾ ಆತಂಕದಿಂದ ಬದುಕು ಸಾಗಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಮ್ಮಲ್ಲಿರುವ ಪ್ರತಿ ನಿಮಿಷವೂ ಮುಖ್ಯವಾಗುತ್ತಿದೆ ಎಂದು ಉತ್ತರಾಖಂಡ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಸಂಧು ಸೋಮವಾರ ಹೇಳಿದ್ದಾರೆ.
ಜೋಶಿಮಠದ ಪರಿಸ್ಥಿತಿಯನ್ನು ಪರಿಶೀಲಿಸಲು ರಾಜ್ಯ ಕಾರ್ಯದರ್ಶಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇಲ್ಲಿನ ನಿವಾಸಿಗಳು ಸುರಕ್ಷತೆಗೆ ಗಮನಹರಿಸಿ, ಅವರನ್ನು ಸ್ಥಳಾಂತರಿಸುವ ಕಾರ್ಯವನ್ನು ಇನ್ನೂ ವೇಗಗೊಳಿಸಿ ಎಂದು ಸೂಚನೆ ನೀಡಿದರು. ಈಗಾಗಲೇ 27 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುಳುಗಡೆಪೀಡಿತ ಮನೆಗಳ ಸಂಖ್ಯೆ 678ಕ್ಕೇರಿದೆ. ಇದುವರೆಗೆ 82 ಕುಟುಂಬಗಳನ್ನು ಪಟ್ಟಣದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಚಮೋಲಿಯಲ್ಲಿನ ವಿಪತ್ತು ನಿರ್ವಹಣಾ ಪ್ರಾಧಿಕಾರದ ಬುಲೆಟಿನ್ ಮಾಹಿತಿ ಕೊಟ್ಟಿದೆ.
ಅಪಾಯದಂಚಿನಲ್ಲಿರುವ 200ಕ್ಕೂ ಹೆಚ್ಚು ಮನೆಗಳಿಗೆ ಜಿಲ್ಲಾಡಳಿತವು, ಇವು ವಾಸಿಸಲು ಅಸುರಕ್ಷಿತ ಮನೆಗಳು ಎಂದು ಸೂಚಿಸುವ ರೆಡ್ ಕ್ರಾಸ್ (ಮಾರ್ಕ್)ಗಳನ್ನು ಹಾಕಿದೆ. ಅಂತಹ ಮನೆಗಳ ನಿವಾಸಿಗಳನ್ನು ತಾತ್ಕಾಲಿಕ ಪರಿಹಾರ ಕೇಂದ್ರಗಳಿಗೆ ಅಥವಾ ಬಾಡಿಗೆ ಮನೆಗಳಿಗೆ ತೆರಳುವಂತೆ ಮನವಿ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಳ್ಳುವ ಪ್ರತಿ ಕುಟುಂಬಗಳಿಗೆ ರಾಜ್ಯ ಸರ್ಕಾರ ಮುಂದಿನ 6 ತಿಂಗಳವರೆಗೆ ಬಾಡಿಗೆ ಕಟ್ಟಲು 4,000 ರೂಪಾಯಿ ನೆರವು ನೀಡುತ್ತದೆ ಎಂದು ಹೇಳಿದೆ.
ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತಂಡ ಸನ್ನದ್ಧವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಜೋಶಿಮಠದಲ್ಲಿ 16 ಕಡೆ ಸಂತ್ರಸ್ತರಿಗೆ ತಾತ್ಕಾಲಿಕ ಪರಿಹಾರ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಹೊರತುಪಡಿಸಿ ಜೋಶಿಮಠದಲ್ಲಿ ಸಂತ್ರಸ್ತರಿಗಾಗಿ 19 ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಶಾಲಾ ಕಟ್ಟಡಗಳನ್ನು ಮತ್ತು ಪಟ್ಟಣದ ಹೊರಗೆ ಪಿಪ್ಪಲಕೋಟಿಯಲ್ಲಿ 20 ಸ್ಥಳಗಳನ್ನು ಗುರುತಿಸಲಾಗಿದೆ.
ಕುಸಿತಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಅಪಾಯವಾಗುವುದನ್ನು ತಡೆಯುವ ಕೆಲಸವನ್ನು ತಕ್ಷಣ ಪ್ರಾರಂಭಿಸಬೇಕು. ದೊಡ್ಡ ಬಿರುಕುಗಳಾಗಿರುವ ಹಾಗೂ ಶಿಥಿಲವಾಗಿರುವ ಮನೆಗಳನ್ನು ಶೀಘ್ರದಲ್ಲೇ ನೆಲಸಮಗೊಳಿಸುವ ಮೂಲಕ ಹೆಚ್ಚಿನ ಅಪಾಯವಾಗದಂತೆ ತಡೆಯಬೇಕು. ಒಡೆದು ಹೋಗಿರುವ ಕುಡಿಯುವ ನೀರಿನ ಪೈಪ್‌ಲೈನ್‌ಗಳು ಮತ್ತು ಒಳಚರಂಡಿ ಲೈನ್‌ಗಳು ಮುಳುಗಡೆ ವಲಯದಲ್ಲಿ ಅಪಾಯವನ್ನು ಇನ್ನೂ ಸಂಕೀರ್ಣಗೊಳಿಸುವ ಸಾಧ್ಯತೆ ಇರುವುದರಿಂದ ತಕ್ಷಣ ದುರಸ್ತಿ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಸಂಧು ತಿಳಿಸಿದ್ದಾರೆ.