ನವದೆಹಲಿ: 75ನೇ ಭಾರತೀಯ ಸೇನಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಎಲ್ಲ ಸೇನಾ ಸಿಬ್ಬಂದಿ ಮತ್ತು ನಿವೃತ್ತ ಯೋಧರಿಗೆ, ಯೋಧರ ಕುಟುಂಬಗಳಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟರ್ನಲ್ಲಿ ಟ್ವೀಟ್ ಮಾಡಿರುವ ಮೋದಿ, ಸೇನಾ ದಿನದಂದು ನಾನು ಎಲ್ಲಾ ಸೇನಾ ಸಿಬ್ಬಂದಿ, ಯೋಧರು ಮತ್ತು ಅವರ ಕುಟುಂಬಗಳಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರತಿಯೊಬ್ಬ ಭಾರತೀಯನು ನಮ್ಮ ಸೇನೆಯ ಬಗ್ಗೆ ಹೆಮ್ಮೆ ಪಡುತ್ತಾನೆ ಮತ್ತು ಸೈನಿಕರಿಗೆ ಯಾವಾಗಲೂ ಕೃತಜ್ಞನಾಗಿರುತ್ತಾನೆ. ದೇಶವನ್ನು ಯಾವಾಗಲೂ ದೇಶದ ರಕ್ಷಣೆಗೆ ಕಾವಲಾಗಿರುವ ಬಿಕ್ಕಟ್ಟಿನ ಸಮಯದಲ್ಲಿ ಸೈನಿಕರ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸೇನಾ ದಿನದ ಮಹತ್ವವೇನು?: ಸ್ವತಂತ್ರ ಭಾರತದ ಮೊದಲ ಸೇನಾ ಮುಖ್ಯಸ್ಥ ಮೇಜರ್ ಜನರಲ್, ಲೆಫ್ಟಿನೆಂಟ್ ಜನರಲ್ ಆಗಿದ್ದ ಫೀಲ್ಡ್ ಮಾರ್ಷಲ್ ಕೋದಂಡೇರ ಎಂ.ಕಾರಿಯಪ್ಪ ಅವರು 1949 ರಲ್ಲಿ ಕೊನೆಯ ಬ್ರಿಟಿಷ್ ಕಮಾಂಡರ್ ಇನ್ ಚೀಫ್ ಜನರಲ್ ಸರ್ ಫ್ರಾನ್ಸಿಸ್ ರಾಯ್ ಬೌಚರ್ ಅವರಿಂದ ಭಾರತೀಯ ಸೇನೆಯ ಅಧಿಪತ್ಯವನ್ನು ಔಪಚಾರಿಕವಾಗಿ ಪಡೆದ ನೆನಪಿಗಾಗಿ ಪ್ರತಿ ವರ್ಷ ಜನವರಿ 15ರಂದು ಸೇನಾ ದಿನವಾಗಿ ಆಚರಿಸಲಾಗುತ್ತದೆ.
ಮೊದಲ ಬಾರಿಗೆ ಬೆಂಗಳೂರಿನಲ್ಲಿ ಪರೇಡ್: ಪ್ರತಿ ವರ್ಷದ ದೇಶದ ರಾಜಧಾನಿ ದೆಹಲಿಯ ಕಂಟೋನ್ಮೆಂಟ್‌ನ ಕರಿಯಪ್ಪ ಪರೇಡ್ ಮೈದಾನದಲ್ಲಿ ಸೇನಾ ದಿನದ ಪರೇಡ್ ಅನ್ನು ಆಯೋಜಿಸಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ ಅಂದರೆ ಕರ್ನಾಟಕದ ಬೆಂಗಳೂರಿನಲ್ಲಿ ಸೇನಾ ದಿನದ ಪರೇಡ್ ನಡೆಯುತ್ತಿದೆ. ರಾಷ್ಟ್ರ ರಾಜಧಾನಿಯಿಂದ ಭಾರತೀಯ ಸೇನೆಯನ್ನು ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ಸರ್ಕಾರದ ಯೋಜನೆಯ ಭಾಗವಾಗಿ ಈ ಭಾಗಿ ಬೆಂಗಳೂರಿನಲ್ಲಿ 75ನೇ ಸೇನಾ ದಿನದ ಪರೇಡ್ ನಡೆಯುತ್ತಿದೆ.
ಸೇನಾ ದಿನಕ್ಕೆ ಹರಿದುಬಂದ ಶುಭಾಶಯಗಳು:ಪ್ರಧಾನಿ ಮೋದಿ ಮಾತ್ರವಲ್ಲದೆ ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಸೇರಿದಂತೆ ಹಲವು ಗಣ್ಯರು ಸೇನಾ ದಿನದ ಹಿನ್ನೆಲೆ ದೇಶದ ಸೈನಿಕರಿಗೆ, ಸೇನಾ ಸಿಬ್ಬಂದಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
"ಸೇನಾ ದಿನದಂದು, ಭಾರತೀಯ ಸೇನೆಯ ಸೈನಿಕರ ತ್ಯಾಗದ ಅಸಂಖ್ಯಾತ ಕಥೆಗಳನ್ನು ನಾವು ನೆನಪಿಸಿಕೊಳ್ಳೋಣ! ದೇಶಕ್ಕಾಗಿ ಪ್ರಾನವನ್ನೇ ತ್ಯಾಗ ಮಾಡಿದ ಸೈನಿಕರು ಯಾವಾಗಲೂ ಶೌರ್ಯ ಮತ್ತು ಧೈರ್ಯದ ಗುರತುಗಳನ್ನೆ ನಮಗಾಗಿ ಬಿಟ್ಟು ಹೋಗಿದ್ದಾರೆ. ಅವರು ವಿಪತ್ತುಗಳ ಸಮಯದಲ್ಲಿ ಸಂರಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಸೇನಾ ದಿನದ ಸಂದರ್ಬದಲ್ಲಿ ನಾನು ಭಾರತೀಯ ಸೇನೆಯ ಎಲ್ಲಾ ವೀರ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ನಮಸ್ಕರಿಸುತ್ತೇನೆ.” ಎಂದು ರಾಷ್ಟ್ರಪತಿ ಭವನ ಟ್ವೀಟ್ ಮಾಡಿದೆ.