ಚೆನ್ನೈ (ತಮಿಳುನಾಡು):ಕೇಂದ್ರ ಸರ್ಕಾರದ ತಾರತಮ್ಯದ ಅನುದಾನ ಹಂಚಿಕೆ ಜೊತೆಗೆ ಅನೇಕ ಸವಾಲುಗಳ ನಡುವೆಯೂ ಮಹಿಳೆಯರಿಗೆ ಗೌರವಧನ ಸೇರಿದಂತೆ ಎಲ್ಲ ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ದ್ರಾವಿಡ ಮಾದರಿ ಸರ್ಕಾರ ಬದ್ಧವಾಗಿದೆ. ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ದಿದ್ದೇವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
ಪ್ರಶ್ನೆ:ವಿವಿಧ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೀರಿ. ಬೆಳಗಿನ ಉಪಹಾರ ಯೋಜನೆ, ಗೃಹಿಣಿಯರಿಗೆ ಗೌರವಧನದಂತಹ ದೊಡ್ಡ ಆರ್ಥಿಕ ಹೊರೆಯ ಯೋಜನೆಗಳ ಅನುಷ್ಠಾನದಲ್ಲಿ ನೀವು ಎದುರಿಸುತ್ತಿರುವ ಸವಾಲುಗಳೇನು?.
ಉತ್ತರ: ದ್ರಾವಿಡ ಮಾದರಿ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಗೌರವಧನ ಕಲ್ಪಿಸುವುದು ಅತ್ಯಂತ ಪ್ರಮುಖವಾಗಿದೆ. ಈ ಎಲ್ಲ ಯೋಜನೆಗಳು ದಿನನಿತ್ಯದ ಅಗತ್ಯಗಳ ಪೂರೈಸುವ ಗುರಿ ಹೊಂದಿರುವುದಿಲ್ಲ. ಆದರೆ, ಭವಿಷ್ಯದ ಅಭಿವೃದ್ಧಿಗೆ ಅಡಿಪಾಯವಾಗಿ ಉಳಿಯುತ್ತವೆ. ಆದ್ದರಿಂದ ದ್ರಾವಿಡ ಮಾದರಿ ಸರ್ಕಾರವು ಯಾವುದೇ ಸವಾಲುಗಳಿದ್ದರೂ ಅವುಗಳನ್ನು ಕಾರ್ಯಗತಗೊಳಿಸಲು ಬದ್ಧವಾಗಿದೆ. ಕಳೆದೆರಡು ವರ್ಷಗಳಲ್ಲಿ ನಾವು ಸಾಲದ ಹೊರೆ, ಆರ್ಥಿಕ ಕೊರತೆ ಮತ್ತು ಆಡಳಿತದ ಅವ್ಯವಸ್ಥೆಯನ್ನು ನಿವಾರಿಸಿದ್ದೇವೆ. ಕೇಂದ್ರ ಸರ್ಕಾರದ ತಾರತಮ್ಯದ ಹಣಕಾಸು ಹಂಚಿಕೆಯಿಂದ ನಾವು ಇನ್ನೂ ಸಂಪೂರ್ಣ ಸ್ವತಂತ್ರವಾಗಿ ಉಸಿರಾಡಲು ಸಾಧ್ಯವಾಗದೇ ಇದ್ದರೂ ರಾಜ್ಯವನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಿದ್ದೇವೆ. ಈಗ ದಿಕ್ಸೂಚಿ ಯೋಜನೆಗಳು ಮತ್ತು ಚುನಾವಣಾ ಭರವಸೆಗಳನ್ನು ಅನುಷ್ಠಾನಗೊಳಿಸುವಲ್ಲಿ ಇಡೀ ದೇಶ ತಮಿಳುನಾಡಿನತ್ತ ನೋಡುತ್ತಿದೆ.
ಪ್ರಶ್ನೆ: ಉತ್ತರ ಭಾರತದಲ್ಲಿ ಬಹಳ ಪ್ರಬಲವಾಗಿರುವ ಹಿಂದುತ್ವ ಸಮೀಕರಣ ಮುರಿಯಲು ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ತಂತ್ರವೇನು?.
ಉತ್ತರ: ಬಿಜೆಪಿಗೆ ಕೋಮುವಾದ ಹೊರತುಪಡಿಸಿ ಬೇರೆ ಯಾವುದೇ ಸಿದ್ಧಾಂತವಿಲ್ಲ. ಆ ಪಕ್ಷಕ್ಕೆ ತನ್ನ ಕಾರ್ಯಕ್ಷಮತೆಯ ಮೇಲೆ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದ್ವೇಷದ ರಾಜಕೀಯದ ಮೇಲೆ ಮತ ಬ್ಯಾಂಕಿಂಗ್ ಮಾಡುತ್ತಿದೆ. ಆದರೆ, 'ಇಂಡಿಯಾ' ಮೈತ್ರಿಕೂಟದ ಶಕ್ತಿಯು ಧಾರ್ಮಿಕ ಸಾಮರಸ್ಯವಾಗಿದೆ. ನಾವು ಸಾಂವಿಧಾನಿಕ ತತ್ವಗಳನ್ನು ನಂಬುತ್ತೇವೆ. ಬಹುತ್ವದ ರಾಜ್ಯಗಳ ಹಕ್ಕುಗಳಲ್ಲಿ ನಂಬಿಕೆ ಹೊಂದಿದ್ದೇವೆ. ಜನರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತೇವೆ. ಹೀಗಾಗಿ ಚುನಾವಣಾ ಕಣದಲ್ಲಿ ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ವಿರೋಧಿಸುವ ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸಿ ಮತ್ತು ಗೆಲುವಿನ ಸಾಧ್ಯತೆ ಅವಲಂಬಿಸಿ ಮಿತ್ರಪಕ್ಷಗಳ ನಡುವೆ ಹೊಂದಾಣಿಕೆ ಖಾತ್ರಿಪಡಿಸುವ ಮೂಲಕ ಭಾರಿ ಜನಾದೇಶದೊಂದಿಗೆ ಚುನಾವಣೆಯನ್ನು ಗೆಲ್ಲುವುದು ತಮ್ಮ ಮೈತ್ರಿಕೂಟದ ತಂತ್ರವಾಗಿದೆ. ಇದು ಇತ್ತೀಚಿನ ಉಪಚುನಾವಣೆಗಳು ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆ ಹೇಗೆ ಸಾಬೀತುಪಡಿಸಿದೆ ಎಂಬುದನ್ನು ನೋಡಿದ್ದೀರಿ.
ಪ್ರಶ್ನೆ: ರಾಷ್ಟ್ರ ರಾಜಕಾರಣದಲ್ಲಿ ಡಿಎಂಕೆ ಗಟ್ಟಿಯಾಗಿ ನೆಲೆಯೂರಲು ಪ್ರಯತ್ನಿಸುತ್ತಿದೆಯೇ?, ಹಿಂದಿಯಲ್ಲಿ ಹಿಂದೆಂದೂ ಕಾಣದಷ್ಟು ನಿಮ್ಮ ಭಾಷಣಗಳು ಪ್ರಕಟವಾಗುತ್ತಿವೆ. ನೀವು ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಹೊಂದಿದ್ದೀರಾ?.
ಉತ್ತರ:ಡಿಎಂಕೆ ಈಗಾಗಲೇ ರಾಷ್ಟ್ರ ರಾಜಕಾರಣದಲ್ಲಿ ಮೂರನೇ ಅತಿ ದೊಡ್ಡ ಪಕ್ಷ. 40 ವರ್ಷಗಳಿಗೂ ಹೆಚ್ಚು ಕಾಲ ತನ್ನ ಛಾಪು ಮೂಡಿಸಿ ಇಂದು ಈ ಉತ್ತುಂಗಕ್ಕೇರಿದೆ. ದಿ. ಪ್ರಧಾನಿ ಇಂದಿರಾ ಗಾಂಧಿಯವರ ಬ್ಯಾಂಕ್ ರಾಷ್ಟ್ರೀಕರಣ ಸೇರಿದಂತೆ ಪ್ರಗತಿಪರ ಕ್ರಮಗಳನ್ನು ಬೆಂಬಲಿಸುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಪಕ್ಷದ ಛಾಪು ಮೂಡಿಸಿದವರು ಎಂ. ಕರುಣಾನಿಧಿ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅವರು ಪ್ರಜಾಸತ್ತಾತ್ಮಕ ಧ್ವನಿಯಾಗಿ ಉತ್ತರ ಭಾರತದ ನಾಯಕರಿಗೆ ತಮಿಳುನಾಡಿನಲ್ಲಿ ಉಸಿರಾಡಲು ಅನುವು ಮಾಡಿಕೊಟ್ಟರು. ಡಿಎಂಕೆ ಸಾಮಾಜಿಕ ನ್ಯಾಯದ ಹೋರಾಟಗಾರ ವಿಪಿ ಸಿಂಗ್ ನ್ಯಾಷನಲ್ ಫ್ರಂಟ್ ಸರ್ಕಾರದ ಬೆನ್ನೆಲುಬು ಆಗಿತ್ತು. ಇದು ಹಿಂದುಳಿದ ವರ್ಗಗಳಿಗೆ ಶೇ.27ರಷ್ಟು ಕೋಟಾವನ್ನು ಸಕ್ರಿಯಗೊಳಿಸುವ ಮೂಲಕ ದೇಶಾದ್ಯಂತ ಸಾಮಾಜಿಕ ನ್ಯಾಯದ ಜ್ವಾಲೆ ಬೆಳಗಿಸಲು ನೆರವಾಯಿತು. ಸಾಮಾನ್ಯ ಕನಿಷ್ಠ ಕಾರ್ಯಕ್ರಮದೊಂದಿಗೆ ವಾಜಪೇಯಿ ಸರ್ಕಾರವನ್ನು ಬೆಂಬಲಿಸಿತ್ತು. ಡಿಎಂಕೆ ಇದ್ದಾಗ ಕೋಮುವಾದಕ್ಕೆ ಯಾವುದೇ ಜಾಗವಿಲ್ಲ ಎಂಬ ಮೆಚ್ಚುಗೆ ಗಳಿಸಿತು. ಸಮ್ಮಿಶ್ರ ಸರ್ಕಾರವು ತನ್ನ ಪೂರ್ಣಾವಧಿ ನಡೆಸಬಹುದೆಂದು ಖಚಿತಪಡಿಸಿಕೊಂಡ ಡಿಎಂಕೆ ಮತ್ತು ಒಕ್ಕೂಟದಲ್ಲಿ ರಾಜಕೀಯ ಸ್ಥಿರತೆಗೆ ಸಹಾಯ ಮಾಡಿತು.
ಡಾ. ಮನಮೋಹನ್ ಸಿಂಗ್ ಅವರ ಎರಡು ಅವಧಿಯ ಯುಪಿಎ ಸರ್ಕಾರಗಳಲ್ಲಿ ಡಿಎಂಕೆ ನಿರ್ಣಾಯಕ ಪಾಲುದಾರ ಆಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ಡಿಎಂಕೆಯ ನಿಲುವು ಯಶಸ್ವಿಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ, ಸಾಮಾಜಿಕ ಮಾಧ್ಯಮ ಸೇರಿದಂತೆ ಹಲವು ರೀತಿಯಲ್ಲಿ ಡಿಎಂಕೆ 'ಇಂಡಿಯಾ' ಮೈತ್ರಿಕೂಟಕ್ಕೆ ಕೊಡುಗೆ ನೀಡುತ್ತಿದೆ. ನನಗೆ ನನ್ನ ಎತ್ತರ ಗೊತ್ತು ಎಂದು ನಮ್ಮ ನಾಯಕ ಕರುಣಾನಿಧಿ ಹೇಳಿದ್ದು ಹಾಗೂ ಎಂಕೆ ಸ್ಟಾಲಿನ್ ಆಗಿ ನನಗೂ ನನ್ನ ಎತ್ತರ ಏನು ಎಂಬುದು ಚೆನ್ನಾಗಿ ಗೊತ್ತು.
ಪ್ರಶ್ನೆ: ಕೇಂದ್ರ ಸರ್ಕಾರವು ಪ್ರತಿ ಹೊಸ ಮಸೂದೆಗೆ ಹಿಂದಿಯಲ್ಲಿ ಹೆಸರಿಸುತ್ತಿದೆ. ಹಿಂದಿನ ಶಾಸನಗಳನ್ನು ಹಿಂದಿಯಲ್ಲಿ ಮರುನಾಮಕರಣ ಮಾಡಲಾಗಿದೆ. ಹಿಂದಿ ಪ್ರಾಬಲ್ಯದ ವಿರೋಧಕ್ಕೆ ಹೆಸರಾದ ಡಿಎಂಕೆ ಮತ್ತು ತಮಿಳುನಾಡಿನ ಪ್ರತಿಕ್ರಿಯೆ ಏನು?.
ಉತ್ತರ: ಡಿಎಂಕೆ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಹಿಂದಿಯಲ್ಲಿದ್ದ ಆಮಂತ್ರಣಗಳನ್ನು ಹರಿದು ಹಾಕುವ ಮೂಲಕ ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಡಿಎಂಕೆಯು ಬಿಜೆಪಿಯ 'ಒಂದು ರಾಷ್ಟ್ರ, ಒಂದು ಭಾಷೆ'ಯ ಗುಪ್ತ ಯೋಜನೆಯ ಅಪಾಯಗಳನ್ನು ನಿರಂತರವಾಗಿ ಒತ್ತಿ ಹೇಳುತ್ತಿದೆ. ಇದು ತಮಿಳಿಗೆ ಮಾತ್ರವಲ್ಲದೆ ಇತರ ರಾಜ್ಯಗಳ ಎಲ್ಲ ಭಾಷೆಗಳಿಗೆ ಹಾನಿಕಾರಕವಾಗಿದೆ. ಈ ಬಗ್ಗೆ ಬೇರೆ ರಾಜ್ಯಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಯಾವುದೇ ಭಾಷೆಗೆ ನಮ್ಮ ವಿರೋಧವಿಲ್ಲ. ಆದರೆ, ಯಾವುದೇ ಭಾಷೆಯ ಹೇರಿಕೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ. ಈ ನಿಲುವು ಮುಂದುವರಿಯುತ್ತದೆ. ಸಂಸತ್ತಿನ ಚುನಾವಣೆಯ ನಂತರ ಹೊಸ ಸರ್ಕಾರವು ಎಲ್ಲ ಭಾಷೆಗಳಿಗೆ ಸಮಾನ ಸ್ಥಾನಮಾನ ಮತ್ತು ಪ್ರಾಮುಖ್ಯತೆ ಸಿಗಲಿದೆ.