ಹೈದರಾಬಾದ್: ವಿಶ್ವದಲ್ಲಿ ಪ್ರತಿವರ್ಷ ಅಂದಾಜು 931 ಮಿಲಿಯನ್ ಟನ್ಗಳಷ್ಟು ಆಹಾರವನ್ನು ಹಾಳು ಮಾಡಲಾಗುತ್ತಿದೆ ಎಂದು 2019ರ ವಿಶ್ವಸಂಸ್ಥೆಯ ವರದಿ ಹೇಳಿದೆ. ಹೀಗೆ ಹಾಳು ಮಾಡುವ ಆಹಾರದಿಂದ ಇಡೀ ಭೂಮಿಯನ್ನು ಏಳು ಬಾರಿ ಸುತ್ತು ಹೊಡೆಯಬಹುದು ಎಂದರೆ ನಾವು ಹಾಳು ಮಾಡುತ್ತಿರುವ ಆಹಾರದ ಪ್ರಮಾಣ ಎಷ್ಟೆಂಬುದು ಅರ್ಥವಾಗುತ್ತದೆ.
ದಿ ಫುಡ್ ಇಂಡೆಕ್ಸ್ ರಿಪೋರ್ಟ್ - 2021
ಭಾರತದಲ್ಲಿಯೂ ಪ್ರತಿವರ್ಷ 68.7 ಮಿಲಿಯನ್ ಟನ್ಗಳಷ್ಟು ಆಹಾರ ತ್ಯಾಜ್ಯ ಸೇರುತ್ತಿದೆ. ವಿಶ್ವಸಂಸ್ಥೆಯ ಪ್ರಾಕೃತಿಕ ಯೋಜನೆ (United Nations Environment Programme -UNEP) ಮತ್ತು ಇದರ ಅಂಗಸಂಸ್ಥೆ ಡಬ್ಲ್ಯೂಆರ್ಎಪಿ ಸಿದ್ಧಪಡಿಸಿದ ದಿ ಫುಡ್ ಇಂಡೆಕ್ಸ್ ರಿಪೋರ್ಟ್ - 2021ರ ಪ್ರಕಾರ, 2019 ರಲ್ಲಿ ವಿಶ್ವಾದ್ಯಂತ 931 ಮಿಲಿಯನ್ ಟನ್ಗಳಷ್ಟು ಆಹಾರವು ತ್ಯಾಜ್ಯವಾಗಿತ್ತು. ಇದರಲ್ಲಿ ಶೇ 61 ರಷ್ಟು ಮನೆಗಳಿಂದ, ಶೇ 26 ರಷ್ಟು ವಾಣಿಜ್ಯ ಆಹಾರ ಸಂಸ್ಥೆಗಳಿಂದ ಹಾಗೂ ಶೇ 13 ರಷ್ಟು ರಿಟೇಲ್ ವಲಯದಿಂದ ಬಂದಿತ್ತು.
ಅಂದರೆ ವಿಶ್ವದಲ್ಲಿ ಬೆಳೆಯಲಾಗುವ ಒಟ್ಟು ಆಹಾರದ ಶೇ 17 ರಷ್ಟು ವೇಸ್ಟ್ ಅಥವಾ ತ್ಯಾಜ್ಯವಾಗುತ್ತದೆ ಎಂದು ಅರ್ಥೈಸಬಹುದು. ಇದನ್ನು ಇನ್ನೂ ಸರಳವಾಗಿ ಹೇಳುವುದಾದರೆ- ತಲಾ 40 ಟನ್ ಸರಕು ತುಂಬಿದ 23 ಮಿಲಿಯನ್ ಲಾರಿಗಳಷ್ಟು ತ್ಯಾಜ್ಯ ಇದಾಗುತ್ತದೆ. ಈ ಲಾರಿಗಳನ್ನು ಬಂಪರ್ ಟು ಬಂಪರ್ ಒಂದರ ಹಿಂದೆ ಒಂದು ನಿಲ್ಲಿಸಿದರೆ ಇವುಗಳಿಂದ ಏಳು ಸುತ್ತು ಭೂಮಿಯನ್ನು ಸುತ್ತಬಹುದು.ಭಾರತದಲ್ಲಿ ಪ್ರತಿವರ್ಷ ಪ್ರತಿವ್ಯಕ್ತಿಗೆ 50 ಕೆಜಿ ಆಹಾರ ಹಾಳು ಮಾಡಲಾಗುತ್ತದೆ. ಇದು ವರ್ಷಕ್ಕೆ ಒಟ್ಟಾರೆ 68,760,163 ಟನ್ಗಳಾಗುತ್ತದೆ.