ನವದೆಹಲಿ:ಕೊರೊನಾ ಲಸಿಕೆ ಫಲಾನುಭವಿಗಳು ಈಗ ತಮ್ಮ ಕೋವಿಡ್-19 ಇನಾಕ್ಯುಲೇಷನ್ ಪ್ರಮಾಣಪತ್ರದಲ್ಲಿನ ದೋಷಗಳನ್ನು ಕೋವಿನ್ ಪೋರ್ಟಲ್‌ನಲ್ಲಿ ಸರಿಪಡಿಸಬಹುದು.
ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ತಿದ್ದುಪಡಿ ಮಾಡಲು ಸರ್ಕಾರ ಕೋವಿನ್ ಪ್ಲಾಟ್‌ಫಾರ್ಮ್‌ಗೆ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಶೀಲ್ ಬುಧವಾರ ತಿಳಿಸಿದ್ದಾರೆ.
ಫಲಾನುಭವಿಗಳ ಕೊರೊನಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳು ದೋಷಮುಕ್ತವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ 'Raise an Issue' ಎಂಬ ವಿಶೇಷ ವೈಶಿಷ್ಟ್ಯವನ್ನು ಸೇರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
COVID-19 ಲಸಿಕೆ ಪ್ರಮಾಣಪತ್ರಗಳಲ್ಲಿನ ದೋಷ ಸರಿಪಡಿಸುವುದು ಹೇಗೆ? "ಅಜಾಗರೂಕ ದೋಷಗಳು ಬಂದಿದ್ದರೆ, ನಿಮ್ಮ ಕೋವಿನ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಲ್ಲಿ ನಿಮ್ಮ ಹೆಸರು, ಹುಟ್ಟಿದ ವರ್ಷ ಮತ್ತು ಲಿಂಗಕ್ಕೆ ಈಗ ನೀವು ತಿದ್ದುಪಡಿ ಮಾಡಬಹುದು. http://cowin.gov.in ಗೆ ಹೋಗಿ ಮತ್ತು ಸಮಸ್ಯೆಯನ್ನು ಸರಿಪಡಿಸಿ" ಎಂದು ಆರೋಗ್ಯ ಸೇತು ಟ್ವಿಟರ್ ಖಾತೆಯಲ್ಲಿ ಹೇಳಲಾಗಿದೆ.
ಕೋವಿನ್‌ನಲ್ಲಿ ಹೊಸ ನಾಗರಿಕ ಸ್ನೇಹಿ ವೈಶಿಷ್ಟ್ಯ ಸೇರಿಸಲಾಗಿದೆ. ಈಗ ವ್ಯಾಕ್ಸಿನೇಷನ್ ಪ್ರಮಾಣಪತ್ರದಲ್ಲಿನ ದೋಷಗಳನ್ನು ನೀವೇ ಸರಿಪಡಿಸಿಕೊಳ್ಳಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಶ್ ಶೀಲ್ ಟ್ವೀಟ್ ಮಾಡಿದ್ದಾರೆ.
ಮಂಗಳವಾರದವರೆಗೆ ರಾಷ್ಟ್ರವ್ಯಾಪಿ ಲಸಿಕಾ ಅಭಿಯಾನದಲ್ಲಿ 23.6 ಕೋಟಿ (23,61,98,726) ಕೋವಿಡ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.