ನವದೆಹಲಿ: ಕಾರ್ಮಿಕರ ಭವಿಷ್ಯ ನಿಧಿಯ ಪಿಂಚಣಿ ಹಣ ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದೆ. ಕಾರ್ಮಿಕರ ಠೇವಣಿ ಆಧರಿತ ವಿಮೆ (ಇಡಿಎಲ್‌ಐ) ಯೋಜನೆಯ ಮೊತ್ತವನ್ನು ಏರಿಕೆ ಮಾಡಲಾಗಿದೆ. ಕೋವಿಡ್ ವೇಳೆ ವಿಮಾದಾರರ ಕುಟುಂಬದ ನೆರವಿಗೆ ಈ ಯೋಜನೆ ಬರಲಿದೆ.
ಈ ಹೊಸ ಬದಲಾವಣೆ ಅನ್ವಯ ಪಿಂಚಣಿದಾರರು ಸಾವನ್ನಪ್ಪಿದ ವೇಳೆ ಅವರ ಕುಟುಂಬಕ್ಕೆ ನೀಡುವ ವಿಮಾ ಮೊತ್ತವನ್ನು ಕನಿಷ್ಠ ಎರಡೂವರೆ ಲಕ್ಷ, ಗರಿಷ್ಠ ಏಳೂವರೆ ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಈ ಮೊದಲು ಪಿಂಚಣಿದಾರರು ಸಾವನ್ನಪ್ಪಿದ ವೇಳೆ ಕನಿಷ್ಠ 2 ಲಕ್ಷ, ಗರಿಷ್ಠ 6 ಲಕ್ಷ ವಿಮಾ ಹಣ ಪಡೆಯುವ ಮಿತಿ ಇತ್ತು.
ಈ ಹೊಸ ನಿಯಮವು 2021ರ ಏಪ್ರಿಲ್ 28ರಿಂದ ಜಾರಿಗೆ ಬರಲಿದೆ ಎಂದು ಇಪಿಎಫ್‌ಓ ತಾನು ಹೊರಡಿಸಿರುವ ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಇದರ ಜೊತೆಗೆ ಸಂಬಂಧಪಟ್ಟ ಪಿಂಚಣಿದಾರರು ಮೃತಪಟ್ಟ ದಿನದ ಹಿಂದಿನ 12 ತಿಂಗಳ ಅವಧಿಗೆ ಅವರು ಉದ್ಯೋಗದಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಪಿಂಚಣಿದಾರರು ಕೆಲಸ ಮಾಡುವ ಸಂಸ್ಥೆ ಬದಲಿಸಿದ್ದರೂ ಅವರಿಗೆ ವಿಮೆ ಒದಗಿಸಲಾಗುತ್ತದೆ.
ಏನಿದು ಕಾರ್ಮಿಕರ ಠೇವಣಿ ಆಧರಿತ ವಿಮೆ ಅಥವಾ ಇಡಿಎಲ್‌ಐ?
ಕೇಂದ್ರ ಸರ್ಕಾರ 1976ರಲ್ಲಿ ಈ ಕಾರ್ಮಿಕರ ಠೇವಣಿ ಆಧಾರಿತ ವಿಮೆ (ಇಡಿಎಲ್‌ಐ) ಯೋಜನೆಯನ್ನ ಜಾರಿಗೊಳಿಸಿತು. ಈ ಮೂಲಕ ಉದ್ಯೋಗಿ ಮರಣಿಸಿದರೆ, ಆತನ ಅಥವಾ ಆಕೆಯ ಕುಟುಂಬಕ್ಕೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿತ್ತು. ಇಪಿಎಫ್ಒದಲ್ಲಿ ಸಕ್ರಿಯರಾಗಿರುವ ಎಲ್ಲರಿಗೂ ಈ ಯೋಜನೆ ಅನ್ವಯವಾಗಲಿದೆ.