ಅಲಹಾಬಾದ್:ರಾಜ್ಯದಲ್ಲಿ ಕೋವಿಡ್ ಹರಡುವಿಕೆ ಮತ್ತು ಕ್ವಾರಂಟೈನ್ ಕೇಂದ್ರಗಳ ಸ್ಥಿತಿಗತಿಗಳ ಕುರಿತು ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶ ಮತ್ತು ಸಣ್ಣ ನಗರಗಳ ಸಂಪೂರ್ಣ ವೈದ್ಯಕೀಯ ವ್ಯವಸ್ಥೆ 'ರಾಮ್ ಭರೋಸ್' ಎನ್ನುವಂತೆ ಆಗಿದೆ ಎಂದು ಹೇಳಿದೆ.
ಮೀರತ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ಗೆ ದಾಖಲಾಗಿದ್ದ 64 ವರ್ಷದ ಸಂತೋಷ್ ಕುಮಾರ್ ಎಂಬವರ ಸಾವು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಿದ್ದಾರ್ಥ್ ವರ್ಮಾ ಮತ್ತು ಅಜಿತ್ ಕುಮಾರ್ ಅವರಿದ್ದ ದ್ವಿಸದಸ್ಯ ಪೀಠ ಈ ರೀತಿ ತಿಳಿಸಿದೆ.
ಸಂತೋಷ್ ಅವರು ಏಪ್ರಿಲ್ 22 ರಂದು ಆಸ್ಪತ್ರೆಯ ಸ್ನಾನನ ಗೃಹದಲ್ಲಿ ಮೂರ್ಛೆ ತಪ್ಪಿ ಬಿದ್ದಿದ್ದರು. ಅವರನ್ನು ಬದುಕಿಸುವ ಪ್ರಯತ್ನ ಮಾಡಿದ್ದರೂ ಸಫಲವಾಗಿರಲಿಲ್ಲ. ಇದಾದ ಬಳಿಕ ವೈದ್ಯರು ಅವರನ್ನು ಅಪರಿಚಿತ ಶವವೆಂದು ವಿಲೇವಾರಿ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.