ಇಂಜಿನಿಯರ್ಗಳು ಎಂದಾಕ್ಷಣ ನಮಗೆಲ್ಲರಿಗೂ ನೆನಪಿಗೆ ಬರುವುದು ಅವರೊಬ್ಬರೇ.. 'ತುಕ್ಕು ಹಿಡಿದು ಅಳಿಯುವುದಕ್ಕಿಂತ ದುಡಿದು ಸವೆಯುವುದೇ ಲೇಸು' ಎಂಬ ತಮ್ಮದೇ ನುಡಿಯಂತೆ ನಡೆದು ಆದರ್ಶ ಪ್ರಾಯರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನ ಇಂದು. ಅವರ ಜನ್ಮದಿನವನ್ನೇ ದೇಶಾದ್ಯಂತ ಇಂಜಿನಿಯರ್ಗಳ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ.
ಕೈಗಾರಿಕರಣ ಇಲ್ಲವೇ ನಾಶ ಎಂಬ ಎಚ್ಚರಿಕೆ ಮೂಲಕ ದೇಶಕ್ಕೆ ಹೊಸ ಆಯಾಮ ಒದಗಿಸಿಕೊಟ್ಟ ವಿಶ್ವೇಶ್ವರಯ್ಯ ಅವರು ದೇಶ ಕಂಡ ಶ್ರೇಷ್ಠ ಸಿವಿಲ್ ಇಂಜಿನಿಯರ್, ಮೈಸೂರಿನ ದಿವಾನರೂ, ಅಣೆಕಟ್ಟುಗಳ ನಿರ್ಮಾಣದ ರೂವಾರಿಗಳೂ ಹಾಗೂ ಅರ್ಥಶಾಸ್ತ್ರಜ್ಞರೂ ಆಗಿದ್ದರು. ಇವರ ದೂರ ದೃಷ್ಟಿ, ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಅವರ ಹುಟ್ಟುಹಬ್ಬವನ್ನು ಇಂಜಿನಿಯರ್ಗಳ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವೇಶ್ವರಯ್ಯ ಅವರ ಬಗ್ಗೆ..
ಸರ್ಎಂವಿ ಎಂದೇ ಹೆಸರಾದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರು ಸೆಪ್ಟೆಂಬರ್ 15, 1861ರಂದು ಕೋಲಾರ ಜಿಲ್ಲೆಯ ಮುದ್ದೇನಹಳ್ಳಿ (ಈಗ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ) ಎಂಬ ಹಳ್ಳಿಯಲ್ಲಿ ಜನಿಸಿದರು. ವಿಶ್ವೇಶ್ವರಯ್ಯ ಅವರ ತಂದೆ ಶ್ರೀನಿವಾಸ ಶಾಸ್ತ್ರಿ, ತಾಯಿ ವೆಂಕಟಲಕ್ಷ್ಮಮ್ಮ. ಇವರು ಆಂಧ್ರ ಪ್ರದೇಶದ ಮೋಕ್ಷಗುಂಡಂ ಎಂಬ ಸ್ಥಳದಿಂದ ವಲಸೆ ಬಂದವರೆಂಬ ಕಾರಣಕ್ಕೆ ಮೋಕ್ಷಗುಂಡಂ ಹೆಸರು ಇವರ ಹೆಸರಿಗೆ ಸೇರಿಕೊಂಡಿತು.
ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದಲ್ಲಿ ಮತ್ತು ಪ್ರೌಢ ಶಿಕ್ಷಣ ಬೆಂಗಳೂರಿನಲ್ಲಿ ಪಡೆದ ಸರ್ಎಂವಿ ಭಾರತ ರತ್ನ ಪುರಸ್ಕೃತ ವಿಶ್ವೇಶ್ವರಯ್ಯ ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಅಧ್ಯಯನ ಮಾಡಿದ್ದು, ಪುಣೆಯ ಕಾಲೇಜ್ ಆಫ್ ಸೈನ್ಸ್‌ನಲ್ಲಿ ಸಿವಿಲ್ ಎಂಜಿನಿಯರಿಂಗ್ ಓದಿದ್ದಾರೆ.