ಮಿಡ್ನಾಪುರ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಮಹಿಳೆಯೊಬ್ಬರು ಬಿಟೆಕ್ ಹಾಗೂ ಎಂಬಿಎ ಪದವಿ ಪೂರ್ಣಗೊಳಿಸಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆದ್ರೆ ಅವರಿಗೆ ಅದು ಇಷ್ಟವಾಗಲಿಲ್ಲ, ತನಗಿಷ್ಟವಾದ ಉದ್ಯೋಗ ಕೈಗೊಳ್ಳಲು ಚಿಂತಿಸಿದರು. ಅದರಂತೆ ಟೀ ಸ್ಟಾಲ್ ಅನ್ನು ತೆರೆದಿದ್ದಾರೆ. ಅದನ್ನು ಅವರು ಬಿಟೆಕ್ ಟೀ ಅಂಗಡಿ ಎಂದು ಕರೆಯುತ್ತಾರೆ. ಬಂಕುರಾ ಮತ್ತು ಕೋಲ್ಕತ್ತಾದಲ್ಲಿ ಇರುವಂತೆಯೇ ಬಿಟೆಕ್ ಟೀ ಅಂಗಡಿ ತೆರೆಯಲಾಗಿದೆ.
ಕಡಿಮೆ ಶಿಕ್ಷಣ ಪಡೆದ ಜನರು ಚಹಾ ಅಂಗಡಿಗಳು ಅಥವಾ ಸಣ್ಣ ಆಹಾರದ ತಿಂಡಿ ಮಾರಾಟದ ಅಂಗಡಿಗಳನ್ನು ಆರಂಭಿಸುತ್ತಾರೆ ಎನ್ನುವುದು ಸಾಮಾನ್ಯ ಗ್ರಹಿಕೆ. ಆದ್ರೆ ದಿನದಿಂದ ದಿನಕ್ಕೆ ಈ ರೀತಿಯ ಯೋಚನೆ ಬದಲಾಗುತ್ತಲೇ ಇರುತ್ತವೆ. ಬಿಟೆಕ್ ಓದಿರುವ 32 ವರ್ಷದ ಸುದೇಷ್ಣಾ ರಕ್ಷಿತ್ ಯಾವುದೇ ಹಿಂಜರಿಕೆಯನ್ನು ತೋರದೇ ಟೀ ಅಂಗಡಿಯನ್ನು ನಡೆಸುತ್ತಿದ್ದಾರೆ.
ಮಿಡ್ನಾಪುರದ ರಾಜಬಜಾರ್‌ನಲ್ಲಿ ತನ್ನ ಐದು ವರ್ಷದ ಮಗಳನ್ನು ನೋಡಿಕೊಳ್ಳುವುದರ ಜೊತೆಗೆ ಈ ಟೀ ಅಂಗಡಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. 'ಬಿಟೆಕ್ ಚಾಯ್‌ವಾಲಾ ಬಹಳಷ್ಟು ದುಃಖದ ನಡುವೆ ಹರಟೆ ಹೊಡೆಯಲು ಮತ್ತು ವಿಶ್ರಾಂತಿ ಪಡೆಯುವ ಸ್ಥಳ' ಎನ್ನುವುದು ಸುದೇಷ್ಣಾರ ಟೀ ಅಂಗಡಿಯ ಧ್ಯೇಯವಾಕ್ಯವಾಗಿದೆ. ಕಚೋರಿ, ದಾಲ್ ಪುರಿ ಮತ್ತು ತಿಂಡಿಗಳ ಜೊತೆಗೆ ಚಹಾದ ವಿವಿಧ ರುಚಿಗಳು ಸುದೇಷ್ಣಾ ಅಂಗಡಿಯಲ್ಲಿ ಲಭ್ಯವಿದೆ.
ಮಿಡ್ನಾಪುರದ ನಿವಾಸಿಯಾಗಿದ್ದ ಸುದೇಷ್ಣಾ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಮೊದಲು ಬಿಟೆಕ್ ಮುಗಿಸಿ ನಂತರ ಎಂಬಿಎ ಪದವಿ ಪಡೆದರು. ಸುದೇಷ್ಣಾ ಕೂಡ ಓದಿದ ನಂತರ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಅವರಿಗೆ ಅದು ಇಷ್ಟವಾಗಲಿಲ್ಲ. ಆಮೇಲೆ ಕೆಲಕಾಲ ಖಾಸಗಿ ಶಾಲೆಯೊಂದರಲ್ಲಿಯೂ ಕೆಲಸ ಮಾಡುತ್ತಿದ್ದರು. ಪತಿ ಚಂದ್ರಜಿತ್ ಸಹಾ ಕೂಡ ಬಿಟೆಕ್ ಮುಗಿಸಿ ಕೋಲ್ಕತ್ತಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳಿಗೆ ಜನ್ಮ ನೀಡಿದ ನಂತರ ಸುದೇಷ್ಣಾ ತಮ್ಮ ಕೆಲಸವನ್ನು ಬಿಟ್ಟು ಸ್ವಾವಲಂಬಿಯಾಗಲು ನಿರ್ಧರಿಸಿದರು. ಜೊತೆಗೆ ಅವರು ತಮ್ಮ ಮಗುವನ್ನು ಬೆಳೆಸುವತ್ತ ಗಮನ ಹರಿಸಿದರು. ತನ್ನ ಮಗಳಿಗೆ ಐದು ವರ್ಷವಾಗುತ್ತಿದ್ದಂತೆ, ಅವರು ವಿಭಿನ್ನವಾಗಿ ಏನನ್ನಾದರೂ ಮಾಡಲು ಯೋಚಿಸಿದರು.
ಇಂಜಿನಿಯರ್ ಸುದೇಷ್ನಾ ಮಾತು:ಅಡುಗೆ ಕೌಶಲ್ಯ ಅರಿತುಕೊಂಡ ನಂತರ ಟೀ ಅಂಗಡಿಯನ್ನು ತೆರೆಯಲು ನಿರ್ಧರಿಸಿದರು. ಆರಂಭದಲ್ಲಿ ಯಾವ ಅಂಗಡಿ ತೆರೆಯಬೇಕು ಎಂಬ ಗೊಂದಲ ಸುದೇಷ್ಣಾಗೆ ಇತ್ತು. ಅಂತಿಮವಾಗಿ, ಅವರು 'ಬಿಟೆಕ್ ಚಾಯ್‌ವಾಲಾ' ಎಂಬ ಅಂಗಡಿಯನ್ನು ಪ್ರಾರಂಭಿಸಿದರು. ಪತಿ, ಮಾವ ಮತ್ತು ಅತ್ತಿಗೆ ಸುದೇಷ್ನಾ ಕೆಲಸಕ್ಕೆ ಸಹಾಯ ಮಾಡಲು ಮುಂದೆ ಬಂದರು. "ಚಹಾ ಮಾರುವವರನ್ನು ಸಾಮಾನ್ಯವಾಗಿ ಸಮಾಜದಲ್ಲಿ ಕೀಳಾಗಿ ಕಾಣುತ್ತಾರೆ. ಹಾಗಾಗಿ ಈ ಟೀ ಅಂಗಡಿಯನ್ನು ತೆರೆದು ಬಿಟೆಕ್ ಚಾಯ್‌ವಾಲಾ ಎಂದು ಹೆಸರಿಟ್ಟಿದ್ದೇನೆ. ಆದ್ದರಿಂದ ಹೆಸರು ಓದಿದ ಎಲ್ಲರಿಗೂ ಪದವಿ ಪಡೆದವರೂ ಸಹ ಚಹಾ ಅಂಗಡಿ ನಡೆಸಬಹುದು ಎನ್ನುವುದು ತಿಳಿಸಿಕೊಟ್ಟಿದ್ದೇನೆ. ಈ ಅಂಗಡಿ ಕೇವಲ 20 ದಿನ ಹಳೆಯದು'' ಎಂದು ಸುದೇಷ್ಣಾ ತಿಳಿಸಿದರು.
ಪತಿ ಚಂದ್ರಜಿತ್ ಸಹಾ ಪ್ರತಿಕ್ರಿಯೆ:ಸುದೇಷ್ಣಾ ನಂತರ ದೊಡ್ಡ ಕೆಫೆಟೇರಿಯಾವನ್ನು ತೆರೆಯುವ ಯೋಜನೆ ಹಾಕಿಕೊಂಡಿದ್ದಾರೆ. ಈ ಕುರಿತು ಅವರ ಪತಿ ಚಂದ್ರಜಿತ್ ಪ್ರತಿಕ್ರಿಯಿಸಿ, "ನನ್ನ ಹೆಂಡತಿಯ ಯೋಜನೆಯನ್ನು ನಾನು ಸ್ವಾಗತಿಸುತ್ತೇನೆ, ನಾನು ಕೆಲಸದ ನಿಮಿತ್ತ ಕೋಲ್ಕತ್ತಾದಲ್ಲಿ ವಾಸಿಸುತ್ತಿದ್ದೇನೆ. ಹಾಗಾಗಿ ನಾನು ಮನೆಗೆ ಬಂದಾಗಲೆಲ್ಲ ಅವಳಿಗೆ ಸಾಧ್ಯವಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆ. ತಮ್ಮ ಮೇಲೆ ನಂಬಿಕೆಯೊಂದಿದ್ದರೆ, ಏನು ಬೇಕಾದರೂ ಮಾಡಬಹುದು ಎಂಬುದನ್ನು ಸುದೇಷ್ಣಾ ತೋರಿಸಿಕೊಟ್ಟಿದ್ದಾರೆ. ತಮ್ಮ ಕಾರ್ಯಕ್ಕೆ ಶಿಕ್ಷಣ ಅಥವಾ ಪದವಿ ಅಡ್ಡಿಯಾಗುವುದಿಲ್ಲ'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಗಾಂಧಿ ಮಹಾಪುರುಷ, ಮೋದಿ ಯುಗಪುರುಷ: ಉಪರಾಷ್ಟ್ರಪತಿ ಧನಕರ್ ಬಣ್ಣನೆ, ಪ್ರತಿಪಕ್ಷಗಳ ಟೀಕೆ