ನವದೆಹಲಿ:ಕಲ್ಲಿದ್ದಲು ಕೊರತೆಯ ಕಾರಣ ಮುಂದಿಟ್ಟುಕೊಂಡು ಈಗಾಗಲೇ ಪಂಜಾಬ್ ರಾಜ್ಯದ 3, ಕೇರಳದ 4 ಮತ್ತು ಮಹಾರಾಷ್ಟ್ರದ 13 ಉಷ್ಣ ವಿದ್ಯುತ್ ಸ್ಥಾವರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ಸಂಭಾವ್ಯ ವಿದ್ಯುತ್ ಕೊರತೆ ಸಮಸ್ಯೆಯ ಕಾರಣಕ್ಕೆ ಕರ್ನಾಟಕ, ಪಂಜಾಬ್ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಗೆ ಕಲ್ಲಿದ್ದಲು ಪೂರೈಕೆ ಮಿತಿಯನ್ನು ಹೆಚ್ಚಿಸುವಂತೆ ಈಗಾಗಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿವೆ. ಜನರು ವಿದ್ಯುತ್ ಅನ್ನು ಮಿತವಾಗಿ ಬಳಸುವಂತೆ ಮಹಾರಾಷ್ಟ್ರ ಸರ್ಕಾರ ಈಗಾಗಲೇ ಸಾರ್ವಜನಿಕರಿಗೆ ಸೂಚನೆ ಕೊಟ್ಟಿದೆ. ಇದೇ ಹಾದಿ ಹಿಡಿದಿರುವ ಕೇರಳ ಸರ್ಕಾರ, ಲೋಡ್ ಶೆಡ್ಡಿಂಗ್ ಅನಿವಾರ್ಯತೆಯನ್ನು ಜನರಿಗೆ ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ಕಲ್ಲಿದ್ದಲು ಮತ್ತು ಅನಿಲವು ವಿದ್ಯುತ್ ಉತ್ಪಾದಿಸುವ ಉಷ್ಣವಿದ್ಯುತ್ ಸ್ಥಾವರಗಳಿಗೆ ನಿರಂತರವಾಗಿ ಪೂರೈಕೆ ಆಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ನಿನ್ನೆ ಮಾತನಾಡಿ, 'ದೆಹಲಿಯಲ್ಲಿ ವಿದ್ಯುತ್ ಕೊರತೆ ತಲೆದೋರದು. ಅದೇ ರೀತಿ, ಕಲ್ಲಿದ್ದಲು ಪೂರೈಕೆಯನ್ನು ನಿಗದಿತ ಪ್ರಮಾಣಕ್ಕೆ ತಕ್ಕಂತೆ ಪೂರೈಸಲಾಗುವುದು' ಎಂದು ಹೇಳಿದ್ದಾರೆ. 'ದಿನದ ಸರಾಸರಿ ಕಲ್ಲಿದ್ದಲು ಲಭ್ಯತೆಯ ವಿಚಾರದಲ್ಲಿ ದೇಶವು ನಾಲ್ಕು ದಿನಗಳಷ್ಟು ಮುಂದಿದೆ. ಹಾಗಾಗಿ, ಅನವಶ್ಯಕ ಗೊಂದಲ ಬೇಡ' ಎಂದು ಸ್ಪಷ್ಟಪಡಿಸಿದ್ದರು.
ಹಾಗಾದ್ರೆ, ಅಂಕಿಅಂಶಗಳು ಹೇಳುವುದೇನು?
ಭಾರತದ ವಿದ್ಯುತ್ ಪ್ರಾಧಿಕಾರದ ಪ್ರಕಾರ, ದೇಶದ ಉಷ್ಣ ವಿದ್ಯುತ್ ಸ್ಥಾವರಗಳು ಹಿಂದೆಂದೂ ಕಂಡಿರದ ಕಲ್ಲಿದ್ದಲು ಕೊರತೆ ಎದುರಿಸುತ್ತಿವೆ. ಇದು ಖಂಡಿತವಾಗಿಯೂ ದೇಶವನ್ನು ತೀವ್ರ ವಿದ್ಯುಚ್ಛಕ್ತಿ ಸಂಕಷ್ಟದತ್ತ ತಳ್ಳುತ್ತದೆ. ಅಕ್ಟೋಬರ್ 5ರ ವರದಿಯಂತೆ, ಕಲ್ಲಿದ್ದಲು ಮೂಲಕ ವಿದ್ಯುತ್ ಉತ್ಪಾದಿಸುವ ದೇಶದ 135 ಉಷ್ಣ ವಿದ್ಯುತ್ ಸ್ಥಾವರಗಳ ಪೈಕಿ 106 (ಅಂದರೆ ಶೇ 80 ರಷ್ಟು) ಸ್ಥಾವರಗಳು ಗಂಭೀರ ಕಲ್ಲಿದ್ದಲು ಸಮಸ್ಯೆ ಎದುರಿಸುತ್ತಿವೆ. ಇವುಗಳ ಬಳಿ ಮುಂದಿನ 6 ಅಥವಾ 7 ದಿನಕ್ಕಾಗುವಷ್ಟು ಮಾತ್ರ ಕಲ್ಲಿದ್ದಲು ಸಂಗ್ರಹವಿದೆ.
ಭಾನುವಾರ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಮಾತನಾಡುತ್ತಾ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಪೂರೈಕೆ ಸುಸ್ಥಿತಿಯ ಪ್ರಮಾಣದಲ್ಲಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿರುವ ವಿದ್ಯುತ್ ಸ್ಥಾವರಗಳಿಗೆ ಬೇಕಿರುವಷ್ಟು ಅನಿಲ ಪೂರೈಕೆ ಮಾಡುವಂತೆ ಈಗಾಗಲೇ ಭಾರತೀಯ ಅನಿಲ ಪ್ರಾಧಿಕಾರ(GAIL)ಕ್ಕೆ ತಿಳಿಸಿದ್ದೇನೆ. ಅವರು ಅನಿಲ ಪೂರೈಕೆಯ ಭರವಸೆ ಕೊಟ್ಟಿದ್ದಾರೆ. ಹಾಗಾಗಿ, ಅನಿಲ ಹಿಂದೆಯೂ ನಮ್ಮಲ್ಲಿ ಕೊರತೆಯಾಗಿಲ್ಲ, ಮುಂದೆಯೂ ಆಗದು ಎಂದರು.