ತಿರುವನಂತಪುರಂ :ಕಾಸರಗೋಡು ಎಂಡೋಸಲ್ಫಾನ್ ದುರಂತ ಪ್ರಕರಣದ 3,014 ಸಂತ್ರಸ್ತರಿಗೆ 119.34 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ ಎಂದು ಕೇರಳ ಸರ್ಕಾರ ಅಲ್ಲಿನ ವಿಧಾನಸಭೆಗೆ ತಿಳಿಸಿದೆ.
ಎಂಡೋಸಲ್ಫಾನ್ ಪೀಡಿತ ವ್ಯಕ್ತಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಶೀಘ್ರ ಪರಿಹಾರ ವಿತರಣೆ ಮತ್ತು ವಿವಿಧ ಪುನರ್ವಸತಿ ಉಪಕ್ರಮಗಳ ಅನುಷ್ಠಾನಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ವಾರಗಳ ನಂತರ ಸಾಮಾಜಿಕ ನ್ಯಾಯ ಸಚಿವೆ ಆರ್ ಬಿಂಧು ಅವರು ರಾಜ್ಯ ವಿಧಾನಸಭೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
ಐಯುಎಂಎಲ್ ಶಾಸಕ ಯು ಎ ಲತೀಫ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉತ್ತರ ಕಾಸರಗೋಡು ಜಿಲ್ಲೆಯ ಮುಳಿಯಾರ್‌ನಲ್ಲಿ ಉದ್ದೇಶಿತ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮಕ್ಕೆ ಶಂಕು ಸ್ಥಾಪನೆ ನೆರವೇರಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಉರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋಆಪರೇಟಿವ್ ಸೊಸೈಟಿಗೆ ಎಂಡೋಸಲ್ಫಾನ್ ಪುನರ್ವಸತಿ ಗ್ರಾಮ ನಿರ್ಮಾಣದ ಜವಾಬ್ದಾರಿಯನ್ನು ವಹಿಸಲಾಗಿದೆ. ಕಾಮಗಾರಿ ಶೀಘ್ರ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
2017ರ ಸುಪ್ರೀಂಕೋರ್ಟ್ ತೀರ್ಪು ಮತ್ತು 2019ರ ಸಿವಿಲ್ ನ್ಯಾಯಾಂಗ ನಿಂದನೆ ತೀರ್ಪಿನ ಆಧಾರದ ಮೇಲೆ 3,014 ಎಂಡೋಸಲ್ಫಾನ್ ಸಂತ್ರಸ್ತರಿಗೆ ಒಟ್ಟು 119.34 ಕೋಟಿ ರೂಪಾಯಿ ಪರಿಹಾರ ವಿತರಿಸಲಾಗಿದೆ. ಉಳಿದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡುವ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಸಚಿವೆ ಬಿಂದು ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಮಿಷನ್ ಮೂಲಕ ಪರಿಹಾರ :ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸುತ್ತಿರುವ ವಿವಿಧ ಕ್ರಮಗಳ ಕುರಿತು ವಿವರ ನೀಡಿದ ಸಚಿವರು, ಸಾಮಾಜಿಕ ಭದ್ರತಾ ಮಿಷನ್ ಮೂಲಕ ಸಂತ್ರಸ್ತರಿಗೆ ಮಾಸಿಕ ಪಿಂಚಣಿ, ಸಂತ್ರಸ್ತರನ್ನು ನೋಡಿಕೊಳ್ಳುವವರಿಗೆ ‘ಆಶ್ವಾಸಕಿರಣ’ ಪಿಂಚಣಿ, 3 ಲಕ್ಷ ರೂ.ವರೆಗಿನ ಬ್ಯಾಂಕ್ ಸಾಲ ಮನ್ನಾ, ಸಾರಿಗೆ ಸೌಲಭ್ಯ ಮತ್ತು ಬಡ್ಸ್ ಶಾಲೆ ಹಾಗೂ ಸಂತ್ರಸ್ತ ಮಕ್ಕಳಿಗೆ ಸ್ಕಾಲರ್‌ಶಿಪ್, ಉಚಿತ ಪಡಿತರ ಇತ್ಯಾದಿ ಕ್ರಮಗಳನ್ನು ಕೈಗೊಂಡಿರುವುದಾಗಿ ವಿವರಿಸಿದರು.
ಎಂಡೋಸಲ್ಫಾನ್, ಆಫ್-ಪೇಟೆಂಟ್ ಆರ್ಗನೊಕ್ಲೋರಿನ್ ಕೀಟನಾಶಕ ಮತ್ತು ಅಕಾರಿಸೈಡ್ ಅನ್ನು ಗೋಡಂಬಿ, ಹತ್ತಿ, ಚಹಾ, ಭತ್ತ, ಹಣ್ಣುಗಳ ಹಾಗೂ ಇತರ ಬೆಳೆಗಳ ಮೇಲೆ 2011ರವರೆಗೆ ವ್ಯಾಪಕವಾಗಿ ಬಳಸಲಾಗುತ್ತಿತ್ತು. ಸುಪ್ರೀಂಕೋರ್ಟ್ ಇದರ ಉತ್ಪಾದನೆ ಮತ್ತು ವಿತರಣೆಯನ್ನು ನಿಷೇಧಿಸಿತ್ತು.
ಎಂಡೋಸಲ್ಫಾನ್‌ನಿಂದ ಕಾಸರಗೋಡಿನ ಹಲವಾರು ಪ್ರದೇಶಗಳಲ್ಲಿ ಜನರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ವಿಶೇಷವಾಗಿ ಮಕ್ಕಳಿಗೆ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಿದೆ ಎಂದು ಆರೋಪಿಸಲಾಗಿದೆ.