ಭೋಪಾಲ್ (ಮಧ್ಯಪ್ರದೇಶ) :ಹಿಂದಿ ರಾಜ್ಯಗಳ ಹೃದಯಭಾಗವಾದ ಮಧ್ಯಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿ ರಾಜ್ಯಭಾರ ಮಾಡಿದ್ದ ಶಿವರಾಜ್ ಸಿಂಗ್ ಚೌಹಾಣ್ ಯುಗ ಅಂತ್ಯಗೊಂಡಿತು. ಹೆಚ್ಚೂ ಕಡಿಮೆ 2 ದಶಕಗಳ ಕಾಲ ಸಿಎಂ ಆಗಿದ್ದ ಎಲ್ಲರ ಪ್ರೀತಿಯ 'ಮಾಮಾ' ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಂದಿನ ತಲೆಮಾರಿನ ನಾಯಕರಾದ ಮೋಹನ್ ಯಾದವ್ ಅವರನ್ನು ಬಿಜೆಪಿ ನೂತನ ಸಿಎಂ ಆಗಿ ಆಯ್ಕೆ ಮಾಡಿದೆ.
ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕಳೆದ ಎರಡು ದಶಕಗಳಲ್ಲಿ ಮಧ್ಯಪ್ರದೇಶದ ಜನರು ನೀಡಿದ ಬೆಂಬಲಕ್ಕಾಗಿ ಮಂಗಳವಾರ ಕೃತಜ್ಞತೆ ಸಲ್ಲಿಸಿದರು. ಭೋಪಾಲ್‌ನಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ವಿದಾಯ ಭಾಷಣ ಮಾಡಿದ ಚೌಹಾಣ್, ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿರುವ ಸಮಯದಲ್ಲಿ ನಾನು ಪದತ್ಯಾಗ ಮಾಡುತ್ತಿದ್ದೇನೆ ಎಂಬುದೇ ನನಗಿರುವ ತೃಪ್ತಿ ಎಂದರು.
ಬಿಜೆಪಿಯು ಪ್ರಚಂಡ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರವನ್ನು ಪುನಃ ಸ್ಥಾಪಿಸಿದೆ. ಚುನಾವಣಾ ಫಲಿತಾಂಶಕ್ಕೂ ಮೊದಲು ಬಿಜೆಪಿ ಸೋಲುತ್ತದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ, ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಶ್ರಮವಹಿಸಿ ರಾಜ್ಯಾದ್ಯಂತ ಸುತ್ತಾಡಿದೆ. ಅದರ ಪ್ರತಿಫಲ ಇಂದು ಪಕ್ಷ ಅಧಿಕಾರದಲ್ಲಿದೆ. ಇದು ನನಗೆ ಸಂತಸ ತಂದಿದೆ ಎಂದರು.
4 ಬಾರಿಯ ಸಿಎಂ ಹೆಗ್ಗಳಿಕೆ:ಶಿವರಾಜ್ ಸಿಂಗ್ ಚೌಹಾಣ್ ಅವರು ಬಿಜೆಪಿಯ ಸ್ಟಾರ್ ನಾಯಕ. 1990 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಬಳಿಕ 1991 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದರು. ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿದ ಅವರು 2005 ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಅಂದಿನಿಂದ ಹಿಂತಿರುಗಿ ನೋಡದ ಚೌಹಾಣ್ ಸತತ ನಾಲ್ಕು ಬಾರಿ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದರು. 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿ, ಕಮಲನಾಥ್ ನೇತೃತ್ವದಲ್ಲಿ ಸರ್ಕಾರ ರಚಿಸಿತು.