ಹೈದರಾಬಾದ್: ನಾಲ್ಕೂವರೆ ದಶಕಗಳ ಇತಿಹಾಸ ಹೊಂದಿರುವ ನಿಷೇಧಿತ ಮಾವೋವಾದಿ ಸಂಘಟನೆಯು ಪ್ರಸ್ತುತ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ. ನಾಯಕರ ಎನ್ಕೌಂಟರ್ಗಳು, ಬಂಧನ, ಅನಾರೋಗ್ಯದಿಂದ ಸಾವು ಅಥವಾ ಶರಣಾಗತಿಯಿಂದಾಗಿ ಉನ್ನತ ನಾಯಕರು ಒಬ್ಬೊಬ್ಬರಾಗಿ ಖಾಲಿಯಾಗಿದ್ದರಿಂದ ಮಾವೋವಾದಿ ಸಂಘಟನೆ ದಿಕ್ಕಿಲ್ಲದಂತಾಗಿದೆ.
ಪಕ್ಷದ ಪಾಲಿಟ್ ಬ್ಯೂರೋ ಸದಸ್ಯ ಕಟಕಂ ಸುದರ್ಶನ್ ಈ ವರ್ಷದ ಆರಂಭದಲ್ಲಿ ಅನಾರೋಗ್ಯದಿಂದ ನಿಧನರಾದರು. ಮತ್ತೊಬ್ಬ ಪಾಲಿಟ್ ಬ್ಯೂರೋ ಸದಸ್ಯ ಪ್ರಮೋದ್ ಮಿಶ್ರಾ ಅಲಿಯಾಸ್ ಬನ್ಬಿಹಾರಿ ಅವರನ್ನು ಆಗಸ್ಟ್ ನಲ್ಲಿ ಬಿಹಾರದಲ್ಲಿ ಬಂಧಿಸಲಾಯಿತು ಮತ್ತು ಕೇಂದ್ರ ಸಮಿತಿ ಸದಸ್ಯ ಸಂಜಯ್ ದೀಪಕ್ ರಾವ್ ಅವರನ್ನು ಒಂದು ವಾರದ ಹಿಂದೆ ಹೈದರಾಬಾದ್ ನಲ್ಲಿ ಬಂಧಿಸಲಾಯಿತು.
ಸೆಪ್ಟೆಂಬರ್ 21, 2004 ರಂದು ಹಿಂದಿನ ಸಿಪಿಐ-ಪೀಪಲ್ಸ್ ವಾರ್ ಮತ್ತು ಮಾವೋವಾದಿ ಕಮ್ಯುನಿಸ್ಟ್ ಸೆಂಟರ್ ಆಫ್ ಇಂಡಿಯಾ (ಎಂಸಿಸಿಐ) ಇವುಗಳ ವಿಲೀನದಿಂದ ಸಿಪಿಐ - ಮಾವೋವಾದಿ ಸಂಘಟನೆ ಹೊರಹೊಮ್ಮಿತು. ಆಗ ಇದರ ಕೇಂದ್ರ ಸಮಿತಿಯಲ್ಲಿ 32 ಸದಸ್ಯರು ಮತ್ತು ಪಾಲಿಟ್ ಬ್ಯೂರೋದಲ್ಲಿ 13-14 ಸದಸ್ಯರು ಇದ್ದರು. ಅವರಲ್ಲಿ 11 ಜನರನ್ನು ಬಂಧಿಸಲಾಗಿದ್ದು, ಮೂವರು ಎನ್ಕೌಂಟರ್ನಲ್ಲಿ ಮತ್ತು ನಾಲ್ವರು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಪ್ರಸ್ತುತ, ನೀತಿ ನಿರ್ಧಾರಗಳಿಗೆ ನಿರ್ಣಾಯಕವಾದ ಪಾಲಿಟ್ ಬ್ಯೂರೋದ ಐದು ಸದಸ್ಯರು ಸೇರಿದಂತೆ ಕೇಂದ್ರ ಸಮಿತಿ ಸದಸ್ಯರ ಸಂಖ್ಯೆ 18 ಕ್ಕೆ ಇಳಿದಿದೆ. ಐದು ವರ್ಷಗಳ ಹಿಂದೆ, ದಂಡಕಾರಣ್ಯದ 14,000 ಚದರ ಕಿಲೋಮೀಟರ್ ದಟ್ಟ ಕಾಡಿನ ಮೇಲೆ ಮಾವೋವಾದಿಗಳು ಬಲವಾದ ಹಿಡಿತ ಹೊಂದಿದ್ದರು. ಪ್ರಸ್ತುತ ಈ ಹಿಡಿತ 5 ಸಾವಿರ ಚದರ ಕಿ.ಮೀ.ಗೆ ಇಳಿದಿದೆ ಎಂಬುದು ಗಮನಾರ್ಹ.