ಶೋಪಿಯಾನ್:ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ರಾವಲ್ಪೋರಾ ಪ್ರದೇಶದಲ್ಲಿ ಇಂದು ಮತ್ತೆ ಎನ್‌ಕೌಂಟರ್ ಪ್ರಾರಂಭಗೊಂಡಿದೆ.
ಮಾರ್ಚ್ 13ರಿಂದ ಎನ್‌ಕೌಂಟರ್ ಪ್ರಕ್ರಿಯೆ ಶುರುವಾಗಿದ್ದು, ಈ ಕಾರ್ಯಾಚರಣೆಯ ಸಮಯದಲ್ಲಿ ಒಬ್ಬ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿದೆ.
"ಹತ್ಯೆಗೀಡಾದ ಭಯೋತ್ಪಾದಕನನ್ನು ಲಷ್ಕರ್-ಎ-ತೊಯಿಬಾ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಶೋಪಿಯಾನ್‌ನ ರಾಖ್ ನರಪೊರಾ ನಿವಾಸಿ ಜಹಾಂಗೀರ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ" ಎಂದು ಜಮ್ಮು-ಕಾಶ್ಮೀರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶೋಪಿಯಾನ್ ಪೊಲೀಸರ ಪ್ರಕಾರ, ಪೊಲೀಸರು ಶನಿವಾರ ರಾತ್ರಿ ಜಂಟಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಈ ಪ್ರದೇಶದಲ್ಲಿ 34 ರಾಷ್ಟ್ರೀಯ ರೈಫಲ್ಸ್ ಮತ್ತು ಸಿಆರ್ಪಿಎಫ್ 14 ಬೆಟಾಲಿಯನ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಸಾವನ್ನಪ್ಪಿದ ಭಯೋತ್ಪಾದಕ ಕಳೆದ ವರ್ಷ ಸೆಪ್ಟೆಂಬರ್‌ನಿಂದ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದನು ಮತ್ತು ಭದ್ರತಾ ಪಡೆಗಳ ಮೇಲಿನ ದಾಳಿ, ನಾಗರಿಕ ದೌರ್ಜನ್ಯ ಸೇರಿದಂತೆ ಹಲವಾರು ಭಯೋತ್ಪಾದಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಎಂದು ತಿಳಿದುಬಂದಿದೆ.
ಯುಎಸ್ಎ ನಿರ್ಮಿತ ಎಂ 4 ಕಾರ್ಬೈನ್ ರೈಫಲ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.