ಜೈಪುರ/ಚಂಡೀಗಢ:ಪಂಜಾಬ್ನಲ್ಲಿ ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿ ಪ್ರದೀಪ್ ಸಿಂಗ್ ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನಕ್ಕೆ ಪೊಲೀಸರು ರಾಜಸ್ಥಾನದ ಜೈಪುರಕ್ಕೆ ತೆರಳಿದ್ದಾರೆ. ಈ ವೇಳೆ ಪಂಜಾಬ್ ಪೊಲೀಸರು ಮತ್ತು ಆರೋಪಿಗಳ ನಡುವೆ ಎನ್ಕೌಂಟರ್ ನಡೆದಿದೆ. ರಾಜ್ ಹೂಡಾ ಎಂಬ ಗ್ಯಾಂಗ್‌ಸ್ಟರ್ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಧರ್ಮ ನಿಂದನೆ ಪ್ರಕರಣದ ಆರೋಪಿಯಾಗಿದ್ದ ಪ್ರದೀಪ್ ಸಿಂಗ್ನನ್ನು ನ.10ರಂದು ಫರೀದ್‌ಕೋಟ್‌ನಲ್ಲಿ ಆರು ಜನ ಶೂಟರ್ಗಳು ಸೇರಿಕೊಂಡು ಕೊಲೆ ಮಾಡಿದ್ದರು. ಈ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿಗಳ ಬಂಧನಕ್ಕೆ ಪಂಜಾಬ್ ಪೊಲೀಸರು ಜೈಪುರಕ್ಕೆ ಆಗಮಿಸಿದ್ದರು.
ಅಪಾರ್ಟ್‌ಮೆಂಟ್‌ನಲ್ಲಿ ಅಡಗಿದ್ದ ಗ್ಯಾಂಗ್‌ಸ್ಟರ್: ರೋಹ್ಟಕ್ ಹರಿಯಾಣದ ಗ್ಯಾಂಗ್‌ಸ್ಟರ್ ಆಗಿರುವ ರಾಜ್ ಹೂಡಾ ಜೈಪುರದಲ್ಲಿ ಅಡಗಿದ್ದಾನೆ ಎಂದು ಪಂಜಾಬ್ ಪೊಲೀಸರಿಗೆ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು. ಇದೇ ಮಾಹಿತಿ ಮೇರೆಗೆ ಭಾನುವಾರ ಜೈಪುರಕ್ಕೆ ಪೊಲೀಸರು ತೆರಳಿದ್ದರು. ಜೈಪುರದ ರಾಮನಗರಿಯ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಅಡಗಿದ್ದ ಖಚಿತ ಮಾಹಿತಿ ಹಿನ್ನೆಲೆ ಪೊಲೀಸರು ಹಿಡಿಯಲು ಹೋಗಿದ್ದರು.
ಈ ವೇಳೆ ಪೊಲೀಸ್ ತಂಡ ಹಾಗೂ ಗ್ಯಾಂಗ್‌ಸ್ಟರ್ ರಾಜ್ ಹೂಡಾ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರಲ್ಲಿ ರಾಜ್ ಹೂಡಾ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ. ಇದರಿಂದ ಹಂತಕ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಾಲಿಗೆ ಗುಂಡು ತಾಗಿರುವ ಹಿನ್ನೆಲೆಯಲ್ಲಿ ರಾಜ್ ಹೂಡಾಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಪೊಲೀಸರು ಗ್ಯಾಂಗ್ಸ್ಟರ್ನನ್ನು ಪಂಜಾಬ್‌ಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಗ್ಯಾಂಗ್‌ಸ್ಟರ್ ರಾಜ್ ಹೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆರೋಪಿಯನ್ನು ದಾಖಲಿಸಿದ ಆಸ್ಪತ್ರೆಯ ಮಾಹಿತಿಯ ಗೌಪ್ಯವಾಗಿ ಇಡಲಾಗಿದೆ.