ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ಪೊಲೀಸರು ಮತ್ತು ಸೇನಾ ಸಿಬ್ಬಂದಿ ಉಗ್ರರ ವಿರುದ್ಧ ಜಂಟಿಯಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪುಲ್ವಾಮ ಜಿಲ್ಲೆಯ ಪರಿಗಾಮ್ ಪ್ರದೇಶದಲ್ಲಿ ಭಯೋತ್ಪಾದಕರ ಚಲನವಲನದ ಮಾಹಿತಿ ಮೇರೆಗೆ ಪೊಲೀಸರು ಹಾಗೂ ಸೇನೆ ಇಡೀ ಪ್ರದೇಶವನ್ನು ಸುತ್ತುವರಿದು, ಶೋಧ ಕಾರ್ಯ ಶುರು ಮಾಡಿತ್ತು. ಈ ವೇಳೆ, ಅಡಗಿ ಕುಳಿತಿದ್ದ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ಭದ್ರತಾ ಸಿಬ್ಬಂದಿ ಕೂಡ ಪ್ರತಿದಾಳಿ ಮಾಡಿದ್ದು, ಎನ್ಕೌಂಟರ್ ಪ್ರಾರಂಭವಾಗಿದೆ. ಇದುವರೆಗೆ ಯಾವುದೇ ಗಾಯ, ಹಾನಿಯ ಬಗ್ಗೆ ವರದಿಯಾಗಿಲ್ಲ.
ಈ ಕುರಿತು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದು, ಪುಲ್ವಾಮದ ಪರಿಗಾಮ್ ಪ್ರದೇಶದಲ್ಲಿ ಎನ್ಕೌಂಟರ್ ಆರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಪ್ರವೃತ್ತವಾಗಿವೆ. ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಸಾಮಾಜಿ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದನ್ನೂ ಓದಿ:ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಟಿಆರ್‌ಎಫ್ ಉಗ್ರನ ಹತ್ಯೆ; ಪಾಕ್ ದಾಳಿಯಿಂದ ಗಾಯಗೊಂಡ ಬಿಎಸ್‌ಎಫ್ ಯೋಧ ಹುತಾತ್ಮ
ಎರಡು ದಿನಗಳ ಹಿಂದೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರೊಬ್ಬರು ಹುತಾತ್ಮರಾಗಿದ್ದರು. ನ.8ರಂದು ಶೋಪಿಯಾನ್ ಜಿಲ್ಲೆಯಲ್ಲಿ ಕಥೋಹಾಲನ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ, ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಜೊತೆ ನಂಟು ಹೊಂದಿದ್ದ ಓರ್ವ ಭಯೋತ್ಪಾದಕನನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದರು. ಅಲ್ಲದೇ, ಹತ್ಯೆಯಾದ ಭಯೋತ್ಪಾದಕನಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸೇರಿದಂತೆ ಇನ್ನಿತರ ಭಯೋತ್ಪಾದನೆ ನಡೆಸಲು ಸಂಚು ರೂಪಿಸಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಮತ್ತೊಂದೆಡೆ, ಸಾಂಬಾ ಜಿಲ್ಲೆಯ ರಾಮಗಢ ಮತ್ತು ಅರ್ನಿಯಾ ಸೆಕ್ಟರ್ ಗಡಿಯಲ್ಲಿ ಪಾಕಿಸ್ತಾನಿ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘಿಸಿದ್ದರು. ಈ ವೇಳೆ, ಭಾರತೀಯ ಸೇನೆ ಕೂಡ ಪ್ರತಿದಾಳಿ ಮಾಡಿತ್ತು. ಇದರಿಂದ ಗುಂಡಿನ ಚಕಮಕಿ ನಡೆದು, ಬಿಎಸ್‌ಎಫ್ ಯೋಧನಿಗೆ ಗುಂಡು ತಗುಲಿ ಹುತಾತ್ಮರಾಗಿದ್ದರು. ಪಾಕಿಸ್ತಾನಿ ಸೈನಿಕರ ದಾಳಿಯಲ್ಲಿ ಗಾಯಗೊಂಡಿದ್ದ ಯೋಧನಿಗೆ ರಾಮಗಢದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಸೇನಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು. ಅಲ್ಲದೇ, ಪಾಕಿಸ್ತಾನ ಪಡೆಗಳು ದಾಳಿ ನಡೆಸಿದ್ದರಿಂದ ಸ್ಥಳೀಯರು ಭಯಭೀತರಾಗಿ ಮನೆಯಿಂದ ಹೊರಬರಲಿಲ್ಲ.
ಇದನ್ನೂ ಓದಿ:ತಪ್ಪಾಗಿ ಗಡಿ ದಾಟಿ ಬಂಧಿತರಾಗಿದ್ದ 80 ಭಾರತೀಯ ಮೀನುಗಾರರ ಬಿಡುಗಡೆ ಮಾಡಿದ ಪಾಕಿಸ್ತಾನ