ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಕೋಕರ್‌ನಾಗ್ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ವೇಳೆ ಭಾರತೀಯ ಸೇನೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಸೇನೆಯ ಮೇಜರ್, ಕರ್ನಲ್ ಹಾಗೂ ಡಿಎಸ್ಪಿ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ಕಾಶ್ಮೀರ ಪೊಲೀಸರು, ಅನಂತ್ನಾಗ್ನಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿದ್ದ ಭಾರತೀಯ ಸೇನೆಯ ಕರ್ನಲ್ ಮತ್ತು ಮೇಜರ್ ಹಾಗೂ ಡಿಎಸ್ಪಿ ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನೆಯ ಕರ್ನಲ್ ಕಮಾಂಡಿಂಗ್ ರಾಷ್ಟ್ರೀಯ ರೈಫಲ್ಸ್ ಯೂನಿಟ್ ಮತ್ತು ಮೇಜರ್ ಅನಂತ್ನಾಗ್ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇವರು ಆಫ್-ವೆಟ್ 19 ಆರ್‌ಆರ್‌ಗೆ ಕಮಾಂಡರ್ ಆಗಿದ್ದರು ಎಂದು ಭಾರತೀಯ ಸೇನೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಲ್ಲೋರಾ ಗ್ರಾಮದಲ್ಲಿ ಎನ್ಕೌಂಟರ್ ನಡೆದಿರುವ ಬಗ್ಗೆ ದೃಢಪಡಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಪೊಲೀಸ್ ಅಧಿಕಾರಿ ಮತ್ತು ಸೇನಾ ಅಧಿಕಾರಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ ಎಂದು ಈ ಮೊದಲು ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಆದರೆ ಆ ಬಳಿಕ ಅವರೆಲ್ಲ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಹಿರಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್, ಸೇನೆ ಹಾಗೂ ಸಿಆರ್‌ಪಿಎಫ್‌ನ ತಂಡಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಭದ್ರತಾ ಪಡೆಗಳು ಉಗ್ರರು ಅಡಗಿರುವ ಸ್ಥಳವನ್ನು ಸಮೀಪಿಸುತ್ತಿದ್ದಂತೆ ಅವರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಎಚ್ಚೆತ್ತ ಭದ್ರತಾ ಪಡೆಗಳು ಉಗ್ರರ ಮೇಲೆ ಪ್ರತಿದಾಳಿ ನಡೆಸಿದ್ದರು. ಇಲ್ಲಿ ನಡೆದ ಭಾರಿ ಚಕಮಕಿಯಲ್ಲಿ ಭಾರತೀಯ ಸೇನೆ ಮೂವರು ಯೋಧರನ್ನು ಕಳೆದುಕೊಂಡಿದೆ.
ಈ ನಡುವೆ ಮೂವರು ಯೋಧರ ಮರಣಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಜ್ಯದ ಡಿಜಿಪಿ ಗೌರವ ವಂದನೆ ಸಲ್ಲಿಸಿದರು. ಇನ್ನು ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಹಾಗೂ ಓಮರ್ ಅಬ್ದುಲ್ಲಾ ಮಡಿದ ಯೋಧರಿಗೆ ಸಂತಾಪ ಸೂಚಿಸಿದ್ದಾರೆ.
ಉಗ್ರನ ಎನ್ಕೌಂಟರ್: ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ನಿನ್ನೆ (ಮಂಗಳವಾರ) ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕ ಹತರಾಗಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಈ ವೇಳೆ ದಟ್ಟ ಅರಣ್ಯದ ಒಳಗೆ ತಪ್ಪಿಸಿಕೊಂಡ ಉಳಿದ ಭಯೋತ್ಪಾದಕರನ್ನು ಪತ್ತೆಹಚ್ಚಲು ಸೇನೆ ಮತ್ತು ವಿಶೇಷ ಕಾರ್ಯಾಚರಣೆ ತಂಡ (ಎಸ್‌ಒಜಿ) ನಡೆಸಿದ ಶೋಧ ಕಾರ್ಯಾ ಮುಂದುವರೆಸಿದೆ.
ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಮುಕೇಶ್ ಸಿಂಗ್ ಅವರು ನಿರ್ದಿಷ್ಟ ಮಾಹಿತಿ ಮೇರೆಗೆ ಸೇನೆ ಮತ್ತು ಎಸ್‌ಒಜಿ ಜಂಟಿ ತಂಡವು ರಜೌರಿಯ ನಾರ್ಲಾ ಗ್ರಾಮದಲ್ಲಿ ಪ್ರದೇಶವನ್ನು ಸುತ್ತುವರೆದಿದ್ದರು. ಶೋಧ ಕಾರ್ಯಾ ನಡೆಯುತ್ತಿರುವುದು ತಿಳಿದ ಭಯೋತ್ಪಾದಕರು ತಂಡದ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ, ತಂಡವೂ ಸಹ ಪ್ರತಿದಾಳಿ ಮಾಡಿದ್ದು, ಒಬ್ಬ ಭಯೋತ್ಪಾದಕನನ್ನು ಎನ್ಕೌಂಟರ್ ಮಾಡಿ ಹೊಡೆದುರುಳಿಸಲಾಗಿತ್ತು. ಭದ್ರತಾ ಪಡೆಗಳು ಸೋಮವಾರ ಸಂಜೆ ಅರಣ್ಯ ಪ್ರದೇಶದಲ್ಲಿ ಶೋಧ ಮತ್ತು ಕಾರ್ಡನ್ ಕಾರ್ಯಾಚರಣೆ ಪ್ರಾರಂಭಿಸಿದ್ದವು.
ಇಬ್ಬರು ವ್ಯಕ್ತಿಗಳ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ನಂತರ ಗುಂಡು ಹಾರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಗುಂಡಿನ ಶಬ್ಧ ಕೇಳಿ ದಟ್ಟವಾದ ಅರಣ್ಯದಲ್ಲಿ ಇಬ್ಬರೂ ಶಂಕಿತರು ಸ್ಥಳದಿಂದ ತಪ್ಪಿಸಿಕೊಂಡಿದ್ದರು. ಅವರ ಕೆಲವು ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತಪ್ಪಿಸಿಕೊಂಡ ಭಯೋತ್ಪಾದಕರು ಅರಣ್ಯದ ಒಳಗೇ ಇರುವ ಸಾಧ್ಯತೆ ಹೆಚ್ಚಿರುವುದರಿಂದ ಪತ್ತೆಹಚ್ಚಲು ಬಾಂಬೆಲ್ ಮತ್ತು ನಾರ್ಲಾ ಸೇರಿದಂತೆ ಹತ್ತಿರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಇದನ್ನೂ ಓದಿ:ರಜೌರಿಯಲ್ಲಿ ಸೇನಾ ಕಾರ್ಯಾಚರಣೆ.. ಒಬ್ಬ ಉಗ್ರನ ಎನ್ಕೌಂಟರ್