ಅಮೃತಸರ್(ಪಂಜಾಬ್):ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಪಂಜಾಬ್ನ ಅಮೃತಸರ ಜಿಲ್ಲೆಯ ಚೀಚಾ ಭಕ್ನಾ ಗ್ರಾಮದಲ್ಲಿ ನಡೆದ ಎನ್ಕೌಂಟರ್ನಲ್ಲಿ ಆರೋಪಿಗಳು ಹತ್ಯೆಗೀಡಾಗಿದ್ದಾರೆಂದು ಪಂಜಾಬ್ ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ. ಗುಂಡೇಟಿಗೆ ಬಲಿಯಾದವರನ್ನ ಜಗ್ರೂಪ್ ಸಿಂಗ್ ಹಾಗೂ ಮನ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಇವರಿಂದ ಎಕೆ 47 ಹಾಗೂ ಕೆಲ ಪಿಸ್ತೂಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಯಲ್ಲಿ ಮೂವರು ಪೊಲೀಸ್ ಅಧಿಕಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಕ, ರಾಜಕೀಯ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಶಂಕಿತ ಆರೋಪಿಗಳು ಮತ್ತು ಪಂಜಾಬ್ ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಮನೆಯಿಂದ ಜನರು ಹೊರಬಾರದಂತೆ ಪೊಲೀಸರು ಈಗಾಗಲೇ ಆದೇಶ ಹೊರಡಿಸಿದ್ದರು. ಅಮೃತಸರ್ದ ಚೋಚಾ ಭಕ್ನಾ ಗ್ರಾಮದಲ್ಲಿ ಎನ್ಕೌಂಟರ್ ನಡೆದಿದೆ. ಆರಂಭದಲ್ಲಿ ಓರ್ವ ಆರೋಪಿಯನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದ ಪೊಲೀಸರು ತದನಂತರ ಮತ್ತೋರ್ವನ ಹೆಡಮುರಿ ಕಟ್ಟಿದ್ದಾರೆ. ಇದೇ ವೇಳೆ ಘಟನೆಯಲ್ಲಿ ಒಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೇ. 19ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೊಸೆವಾಲಾ ಹತ್ಯೆ ಮಾಡಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಗ್ಯಾಂಗ್ಸ್ಟರ್ಗಳಾದ ಜಗರೂಪ್ ಸಿಂಗ್, ಮನಪ್ರೀತ್ ಸಿಂಗ್ ಸೇರಿದಂತೆ ಕೆಲವರ ಬಂಧನ ಮಾಡಿದ್ದಾರೆ.