ಪಾಟ್ನಾ(ಬಿಹಾರ):ಬಿಹಾರದಲ್ಲಿ ಸಿಎಂನಿತೀಶ್ ಕುಮಾರ್ ಸರ್ಕಾರಕ್ಕೆ ಮುಜುಗರ ಉಂಟಾಗುವಂತಹ ಘಟನೆ ನಡೆದಿದೆ. ವಿಧಾನಸಭೆಯ ಆವರಣದಲ್ಲಿ ಮದ್ಯದ ಖಾಲಿ ಬಾಟಲಿಗಳು ಪತ್ತೆಯಾಗಿವೆ.
ಕಳ್ಳಭಟ್ಟಿ ಪ್ರಕರಣಗಳಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬೆನ್ನಲ್ಲೇ ಈ ಘಟನೆ ಬೆಳಕಿಗೆ ಬಂದಿದ್ದು ನಿತೀಶ್ ನೇತೃತ್ವದ ಸರ್ಕಾರಕ್ಕೆ ಕಪ್ಪು ಚುಕ್ಕೆಯೆಂದು ಟೀಕಿಸಲಾಗಿದೆ. ವಿಧಾನಸಭೆಯ ಆವರಣದಲ್ಲಿನ ದ್ವಿಚಕ್ರ ವಾಹನಗಳ ಪಾರ್ಕಿಂಗ್ಗೆ ಮೀಸಲಿಟ್ಟ ಜಾಗದ ಮರದ ಕೆಳಗೆ ಮದ್ಯದ ಖಾಲಿ ಬಾಟಲಿಗಳು ಪತ್ತೆಯಾಗಿವೆ. ಸಿಎಂ ಅವರ ಕೊಠಡಿಗೆ ಸುಮಾರು ಅಂದಾಜು ನೂರು ಮೀಟರ್ ದೂರದಲ್ಲಿ ಇವು ದೊರೆತಿದ್ದು, ಅತಿರೇಕದ ಸಂಗತಿ ಎಂದು ವಿಪಕ್ಷ ನಾಯಕ, ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಆಕ್ರೋಶ ವ್ಯಕ್ತಪಡಿಸಿದರು.
ಮದ್ಯವರ್ಜನೆ ಪ್ರಮಾಣದ ಬೆನ್ನಲ್ಲೇ ಘಟನೆ:
ಸೋಮವಾರವಷ್ಟೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದ್ಯಸೇವನೆ ಮಾಡುವುದಿಲ್ಲ ಎಂದು ಸೆಂಟ್ರಲ್ ಹಾಲ್ನಲ್ಲಿ ಎನ್ಡಿಎ ನಾಯಕರು ಪ್ರಮಾಣ ಮಾಡಿದ್ದರು. ಈ ಕಾರ್ಯಕ್ರಮ ನಡೆದ 24 ಗಂಟೆಯೊಳಗೆ ಅದೇ ಜಾಗದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ.
ಆರ್‌ಜೆಡಿ ನಾಯಕರು ಅಕ್ರಮ ಮದ್ಯ ಮಾರಾಟ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಎನ್ಡಿಎ ನಾಯಕರು ಆರೋಪಿಸುತ್ತಿದ್ದಾರೆ. ಆರ್‌ಜೆಡಿ ನಾಯಕರೇ ವಿಧಾನಸಭೆಯ ಆವರಣದಲ್ಲಿ ಬಾಟಲಿಗಳನ್ನು ಹಾಕಿದ್ದಾರೆ ಎಂದು ಅವರು ಆರೋಪಿಸಿದರೂ ಅಚ್ಚರಿಯಿಲ್ಲ ಎಂದು ತೇಜಸ್ವಿ ಯಾದವ್ ವ್ಯಂಗ್ಯವಾಡಿದರು.