ಕರ್ನಾಟಕ

karnataka

ETV Bharat / bharat

20ನೇ ವಯಸ್ಸಿಗೆ ಉದ್ಯಮಿ, 2 ಸಾವಿರ ಜನಕ್ಕೆ ಉದ್ಯೋಗ: ಶಬನಮ್​ ಯಶೋಗಾಥೆ - 20 ವರ್ಷದ ಶಬನಮ್ ಉದ್ಯಮವೊಂದನ್ನು ಕಟ್ಟಿ ಬೆಳೆಸಿದ್ದು

ಯುದ್ಧ ಮತ್ತು ಸಂಘರ್ಷದ ನಾಡಿನಲ್ಲಿ ಬಡತನ ಹೊಸದೇನಲ್ಲ. ಅದರಲ್ಲೂ ಮಹಿಳೆಯರ ಪರಿಸ್ಥಿತಿ ನಿಕೃಷ್ಟವಾಗಿರುತ್ತದೆ. ಇಂಥ ಕಠಿಣ ಸ್ಥಿತಿಯಲ್ಲಿ 20 ವರ್ಷದ ಶಬನಮ್ ಉದ್ಯಮವೊಂದನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲದೆ ಇನ್ನೂ 2 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ.

20ನೇ ವಯಸ್ಸಿಗೆ ಉದ್ಯಮಿ 2 ಸಾವಿರ ಜನಕ್ಕೆ ಉದ್ಯೋಗ.. ಶಬನಮ್​ಳ ಯಶೋಗಾಥೆ
employment for 2 thousand people Shabanam success story

By

Published : Dec 2, 2022, 12:34 PM IST

ಯುದ್ಧ ಮತ್ತು ಸಂಘರ್ಷದ ನಾಡಿನಲ್ಲಿ ಬಡತನ ಹೊಸದೇನಲ್ಲ. ಅದರಲ್ಲೂ ಮಹಿಳೆಯರ ಪರಿಸ್ಥಿತಿ ಇನ್ನೂ ನಿಕೃಷ್ಟವಾಗಿರುತ್ತದೆ. ಇಂಥ ಕಠಿಣ ಸ್ಥಿತಿಯಲ್ಲಿ 20 ವರ್ಷದ ಶಬನಮ್ ಉದ್ಯಮವೊಂದನ್ನು ಕಟ್ಟಿ ಬೆಳೆಸಿದ್ದು ಮಾತ್ರವಲ್ಲದೆ ಇನ್ನೂ 2 ಸಾವಿರ ಜನರಿಗೆ ಉದ್ಯೋಗ ನೀಡಿದ್ದಾರೆ. ಹೈದರಾಬಾದಿನಲ್ಲಿ ನಡೆದ ಸಾರಸ್ 2022 ಮೇಳದಲ್ಲಿ ಭಾಗವಹಿಸಿದ್ದ ಶಬನಮ್ ತಮ್ಮ ಸಾಧನೆಯ ಹಾದಿಯ ಬಗ್ಗೆ ಈಟಿವಿ ಭಾರತ್ ಜೊತೆ ಮಾತನಾಡಿದ್ದಾರೆ.

'ನಮ್ಮದು ಜಮ್ಮುವಿನ ಬಡ್ಗಾಮ್ ಜಿಲ್ಲೆಯ ಹಂಜಾರಾ ಗ್ರಾಮ. ನಮ್ಮ ಗ್ರಾಮ ಪರ್ವತ ಶ್ರೇಣಿಗಳ ನಡುವೆ ಇದೆ. ತಂದೆ ನಜೀರ್ ಅಹಮದ್ ಕೃಷಿಕರು. ತಾಯಿ ಮಸಬಾ ಬಾನೋ ಗೃಹಿಣಿ. ನನಗೆ ಮೂವರು ಸಹೋದರಿಯರು ಮತ್ತು ಕಿರಿಯ ಸಹೋದರ ಇದ್ದಾರೆ. ಹಿರಿಯಳಾದ ನಾನು ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡುತ್ತಿದ್ದೆ ಮತ್ತು ನನ್ನ ತಂಗಿಯರನ್ನು ಮತ್ತು ಸಹೋದರನನ್ನು ನೋಡಿಕೊಳ್ಳುತ್ತಿದ್ದೆ. ಅದರಿಂದ ಹೈಸ್ಕೂಲಿಗೆ ಹೋಗಲಾಗಲಿಲ್ಲ.

ಮನೆಯ ಹಿಂದೆ ಅಮ್ಮ ಬೆಳೆದ ತರಕಾರಿ ಹಾಗೂ ತಂದೆ ತಂದ ದುಡಿಮೆಯಿಂದ ಹೊಟ್ಟೆ ತುಂಬಿಸುವುದೇ ಕಷ್ಟವಾಗಿತ್ತು. ನಾನು ಏನಾದರೂ ಮಾಡಬೇಕು, ಆದರೂ ಮನೆಯಲ್ಲೇ ಇರಬೇಕೆಂದುಕೊಂಡೆ. ಟೈಲರಿಂಗ್ ಮತ್ತು ಕಸೂತಿಯಲ್ಲಿ ಸರ್ಕಾರ ಉಚಿತ ತರಬೇತಿ ನೀಡುತ್ತದೆ ಎಂದು ನಾನು 15 ವರ್ಷದವಳಿದ್ದಾಗ ನನಗೆ ಗೊತ್ತಾಗಿತ್ತು. ಆದರೆ ತರಬೇತಿ ಪಡೆಯಲು ಅಮ್ಮ ಒಪ್ಪಲಿಲ್ಲ. ನೆರೆಹೊರೆಯವರು ನಮ್ಮ ಬಗ್ಗೆ ಕೆಟ್ಟದಾಗಿ ನೋಡುತ್ತಾರೆ ಎಂದು ಅವರು ಹೇಳಿದರು. ಆದರೆ ನಾವು ಕೌಶಲ್ಯಗಳನ್ನು ಕಲಿಯದಿದ್ದರೆ ನಮ್ಮ ಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂದು ನಾನು ಅವಳಿಗೆ ಮನವರಿಕೆ ಮಾಡಿದೆ.

ಹೊಲಿಗೆ ಕಲಿಯುವಾಗ ಸ್ವಸಹಾಯ ಸಂಘಗಳ ಬಗ್ಗೆ ತಿಳಿದುಕೊಂಡೆ. ನಮ್ಮ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಈ ಗುಂಪುಗಳಿಗೆ ಸೇರಿಕೊಂಡು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ ಎಂದು ತಿಳಿದ ನಂತರ ನಾನು ಸಹ ಸದಸ್ಯಳಾದೆ. ನಮ್ಮ ತಂಡದ ಬಹುತೇಕ ಎಲ್ಲರಿಗೂ ಟೈಲರಿಂಗ್ ಮತ್ತು ಕಸೂತಿ ತಿಳಿದಿದೆ. ಆ ಧೈರ್ಯದಿಂದ ಕೈಯಲ್ಲಿ ಹಣ ಇಲ್ಲದಿದ್ದರೂ ಬ್ಯಾಂಕ್ ಸಾಲ ಪಡೆದು ಬಟ್ಟೆಗಳ ಮೇಲೆ ಸುಂದರ ಕಸೂತಿ ಮಾಡಿ ವಾರಾಂತ್ಯದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದೆವು. ಸಣ್ಣ ಅಂಗಡಿಗಳಿಗೂ ಪೂರೈಕೆ ಮಾಡುತ್ತೇವೆ. ಹಾಗಾಗಿ ನಮಗೆಲ್ಲರಿಗೂ ಸಾಕಷ್ಟು ಆದಾಯ ಬರತೊಡಗಿತು.

ಒಂದು ವರ್ಷದಲ್ಲಿ ಮಾರ್ಕೆಟಿಂಗ್ ಕೌಶಲ್ಯಗಳು ಸುಧಾರಿಸಿದವು. ನಾನು ನನ್ನ ಸಹೋದರಿಯರಿಗೆ ನನ್ನಂತೆ ಇರಬಾರದು ಎಂದು ಮನವರಿಕೆ ಮಾಡಲಾರಂಭಿಸಿದೆ. ಜೀವನದಲ್ಲಿ ಸ್ವಲ್ಪ ರಿಲ್ಯಾಕ್ಸ್ ಆದ ಮೇಲೆ ಇಂಟರ್ ಕೂಡ ಮುಗಿಸಿದ್ದೆ. ಅಕ್ಕ ಇಕ್ರಾ ಪದವಿ ಓದುತ್ತಿದ್ದಾಳೆ. ಆಕೆ ಸಾಮಾಜಿಕ ಜಾಲತಾಣದ ಮೇಲೆ ಉತ್ತಮ ಹಿಡಿತ ಹೊಂದಿದ್ದಾಳೆ. ಅವಳ ಸಹಾಯದಿಂದ ಇನ್ನೊಂದು ಹೆಜ್ಜೆ ಮುಂದೆ ಇಡಬೇಕೆಂದು ಅನಿಸಿತು. ಸುತ್ತಮುತ್ತಲಿನ ಹಳ್ಳಿಗಳ ಮಹಿಳೆಯರ ಸಹಾಯದಿಂದ ವಿಶೇಷವಾಗಿ ಗುಣಮಟ್ಟದ ಶಾಲುಗಳನ್ನು ತಯಾರಿಸಲು ಪ್ರಾರಂಭಿಸಿದೆವು. ಇಕ್ರಾ ಇವುಗಳ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಾಕುತ್ತಿದ್ದಳು.

ಆಗ ಜಮ್ಮುವಿನಿಂದ ನಮ್ಮ ಶಾಲುಗಳಿಗೆ ಮೊಟ್ಟ ಮೊದಲ ಖರೀದಿ ಆರ್ಡರ್ ಬಂದಿತ್ತು. ಆವಾಗ ನನ್ನ ಸಂತೋಷಕ್ಕೆ ಮಿತಿಯೇ ಇರಲಿಲ್ಲ. ನಿಧಾನವಾಗಿ ಆರ್ಡರ್‌ಗಳು ಹೆಚ್ಚಾದವು. ಅವರ ಜೊತೆಯಲ್ಲಿ ನಾನು ಪ್ರದರ್ಶನಗಳಿಗೆ ಹೋಗುತ್ತಿದ್ದೆ. ಈ ನಾಲ್ಕು ವರ್ಷಗಳಲ್ಲಿ ಸಿಕ್ಕಿಂ, ಗುರ್ಗಾಂವ್, ದೆಹಲಿ, ಲಕ್ನೋ, ಗೋವಾ, ಕೆನಡಾ, ಲಂಡನ್ ಮತ್ತು ಜರ್ಮನಿಯಿಂದ ಹೆಚ್ಚಿನ ಆರ್ಡರ್‌ಗಳು ಬರುತ್ತಿವೆ. ಕೇವಲ ಕಾಶ್ಮೀರದ ಶಾಲುಗಳು ಮಾತ್ರವಲ್ಲದೆ ನಾವು ಕುರ್ತಿಗಳು, ಕಫ್ತಾನ್ಗಳು, ಹೊದಿಕೆಗಳು, ಚೀಲಗಳು ಮತ್ತು ಕ್ವಿಲ್ಟ್ ಗಳಂಥ 15 ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ. ತಿಂಗಳಿಗೆ ಸಾವಿರಾರು ಆರ್ಡರ್‌ಗಳು ಬರುತ್ತಿವೆ. ಪ್ರತಿ ವರ್ಷ ರೂ 30 ರಿಂದ 50 ಲಕ್ಷ ವಾರ್ಷಿಕ ಆದಾಯ ಬರುತ್ತಿದೆ. ಹೆಚ್ಚು ವಿದ್ಯಾಭ್ಯಾಸವಿಲ್ಲದ ನಾನು ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಶ್ರಮಿಸಬೇಕಾಗಿತ್ತು. ಪ್ರತಿ ಅನುಭವದಿಂದ ಪಾಠಗಳನ್ನು ಕಲಿತೆ. ಅಮ್ಮನಿಗೆ ನನ್ನ ಬಗ್ಗೆ ಹೆಮ್ಮೆ ಇದೆ. ನನ್ನ ಸಂಸಾರ ಏಳಿಗೆಯಾದರೆ ಸಾಕು ಅಂದುಕೊಂಡಿದ್ದೆ. ಬಡತನದಿಂದ ಹೊರಬರಲು ನಾನು ಈ ದಿಕ್ಕಿನಲ್ಲಿ ನಡೆಯಲು ಪ್ರಾರಂಭಿಸಿದರೂ, ನಂತರ ನಾನು ಅನೇಕ ಜನರಿಗೆ ಸಹಾಯ ಮಾಡಬಲ್ಲೆ ಎಂಬ ಅಂಶವು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿತು'.

ಇದನ್ನೂ ಓದಿ: ಕುರಿ ಕಾಯುವ ಯುವಕ 6ನೇ ಪ್ರಯತ್ನದಲ್ಲಿ IAS ಅಧಿಕಾರಿಯಾದ ಯಶೋಗಾಥೆ!

ABOUT THE AUTHOR

...view details