ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಮಾನದಲ್ಲಿ ನೀಡಿದ ಊಟದಲ್ಲಿ ಕೂದಲು ಸಿಕ್ಕಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಹಾಗು ನಟಿ ಮಿಮಿ ಚಕ್ರವರ್ತಿ ಟ್ವೀಟ್ ಮಾಡಿದ್ದಾರೆ. ವಿಮಾನ ಸಿಬ್ಬಂದಿಗೆ ದೂರು ನೀಡಿದ್ದರೂ ಅವರು ಯಾವುದೇ ಪ್ರತಿಕ್ರಿಯೆ ಕೊಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಾಳಿ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ಮಿಮಿ ಚಕ್ರವರ್ತಿ ರಾಜಕಾರಣಿಯಾಗಿ ಬದಲಾಗಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ 24 ಪರಗಣ ಜಿಲ್ಲೆಯ ಜಾಧವ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದಾರೆ. ಇತ್ತೀಚೆಗೆ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಊಟದಲ್ಲಿ ಕೂದಲು ದೊರೆತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೂರಿದ್ದಾರೆ.
ಇದನ್ನೂ ಓದಿ:ದುಬೈನಿಂದ ಆಕ್ಲೆಂಡ್ಗೆ ಹೊರಟಿದ್ದ ವಿಮಾನ : 13 ಗಂಟೆಗಳ ಹಾರಾಟ ನಡೆಸಿ ಮತ್ತೆ ದುಬೈಗೆ ಆಗಮನ
ಈ ಬಗ್ಗೆ ಫೋಟೋ ಸಮೇತವಾಗಿ ಮಂಗಳವಾರ ರಾತ್ರಿ ಟ್ವೀಟ್ ಮಾಡಿದ್ದು, "ಆತ್ಮೀಯ ಎಮಿರೇಟ್ಸ್,ನೀವು ಎರಡನೇ ದೊಡ್ಡ ಜಾಗತಿಕ ವಿಮಾನಯಾನ ಸಂಸ್ಥೆಯಾಗಿ ಬೆಳೆದಿದ್ದೀರಿ. ಆದರೆ ನಿಮ್ಮ ವಿಮಾನದಲ್ಲಿ ನೀಡಲಾದ ಊಟದಲ್ಲಿ ಕೂದಲು ಸಿಕ್ಕಿರುವುದು ಒಳ್ಳೆಯ ವಿಚಾರವಲ್ಲ. ಈ ಕುರಿತು ನಾನು ಇಮೇಲ್ ಮಾಡಿದ್ದೇನೆ. ನಿಮ್ಮಿಂದ ಪ್ರತ್ಯುತ್ತರ ಅಥವಾ ಕ್ಷಮೆ ಕೇಳಿಬಂದಿಲ್ಲ'' ಎಂದು ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಎಮಿರೇಟ್ಸ್ ವಿಮಾನಯಾನ ಸಂಸ್ಥೆಯು, ''ಹಲೋ, ಇದನ್ನು ತಿಳಿದು ನಮಗೆ ವಿಷಾದವಾಗಿದೆ. ಆನ್‌ಲೈನ್ ಫಾರ್ಮ್ ಮೂಲಕ ದಯವಿಟ್ಟು ನಿಮ್ಮ ದೂರನ್ನು https://bit.ly/3b9jX23 ಲಿಂಕ್ನಲ್ಲಿ ಬರೆಯಿರಿ. ನಮ್ಮ ಗ್ರಾಹಕರ ಸಂಪರ್ಕ ತಂಡವು ಪ್ರಸ್ತಾಪಿಸಿದ ವಿಷಯದ ಆಧಾರದ ಮೇಲೆ ಅದನ್ನು ಪರಿಶೀಲಿಸುತ್ತದೆ. ಜೊತೆಗೆ ಇಮೇಲ್ ಮೂಲಕ ನಿಮಗೆ ಪ್ರತಿಕ್ರಿಯಿಸುತ್ತದೆ. ಧನ್ಯವಾದಗಳು'' ಎಂದು ಹೇಳಿದೆ. ಇದೇ ವೇಳೆ ಮತ್ತೊಂದು ಟ್ವೀಟ್ ಮಾಡಿರುವ ಸಂಸದೆ, ''ನೀವು ಕಾಳಜಿವಹಿಸಿದರೆ ಎಲ್ಲ ವಿವರಗಳೊಂದಿಗೆ ನನ್ನ ಇ-ಮೇಲ್ ಅನ್ನು ನೀವು ನೋಡಬಹುದು'' ಎಂದು ಚಾಟಿ ಬೀಸಿದ್ದಾರೆ.
ಇದನ್ನೂ ಓದಿ:ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಕೇಸ್: 4 ಗ್ಲಾಸ್ ವಿಸ್ಕಿ ಕುಡಿದು ತೇಲಾಡುತ್ತಿದ್ದ ಆರೋಪಿ!
ಇತ್ತೀಚೆಗೆ ವಿಮಾನ ಪ್ರಯಾಣಿಕರಿಗೆ ಬೇಸರ ಮೂಡಿಸುವ ಘಟನೆಗಳು ಮತ್ತು ವಿಮಾನಯಾನ ಸೇವೆ ಬಗ್ಗೆ ಪ್ರಶ್ನೆ ಹುಟ್ಟು ಹಾಕುವಂತಹ ಹಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಮಹಿಳಾ ಪ್ರಯಾಣಿಕರೊಬ್ಬರು ಮೇಲೆ ಸಹಪುರುಷ ಪ್ರಯಾಣಿಕನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನಂತರ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಈ ಘಟನೆಯನ್ನು ತಡೆಯಲು ವಿಫಲವಾದ ಸಂಬಂಧಿಸಿದ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು ದಂಡ ಹಾಕಿ ಬಿಸಿ ಮುಟ್ಟಿಸಿತ್ತು.