ಜಲ್ಪೈಗುರಿ (ಪಶ್ಚಿಮ ಬಂಗಾಳ): ಹವಾಮಾನ ವೈಪರೀತ್ಯದಿಂದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಪೈಲಟ್ ಸಮಯ ಪ್ರಜ್ಞೆ ಹಾಗೂ ಮುನ್ನೆಚ್ಚರಿಕೆ ಕ್ರಮದಿಂದ ಕೂದಲೆಳೆ ಅಂತರದಲ್ಲಿ ಅಪಾಯ ತಪ್ಪಿದೆ ಎಂದು ವರದಿಯಾಗಿದೆ. ಪೈಲಟ್ನ ಕಾರ್ಯಕ್ಕೆ ಟಿಎಂಸಿ ನಾಯಕಿ ಧನ್ಯವಾದ ಅರ್ಪಿಸಿದ್ದಾರೆ.
ಜಲ್ಪೈಗುರಿಯಲ್ಲಿ ಪಂಚಾಯತ್ ಚುನಾವಣಾ ಪ್ರಚಾರ ಸಭೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ಪಾಲ್ಗೊಂಡಿದ್ದರು. ನಂತರ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ತಲುಪಲು ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಸಿಲಿಗುರಿ ಸಮೀಪದ ಸೆವೋಕ್ ವಾಯು ನೆಲೆಯಲ್ಲಿ ಹೆಲಿಕಾಪ್ಟರ್ ಅನ್ನು ಪೈಲಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಇದರಿಂದ ಸುರಕ್ಷಿತವಾಗಿ ಮಮತಾ ವಾಯು ನೆಲೆಯಲ್ಲಿ ಇಳಿದಿದ್ದು, ಅಲ್ಲಿಂದ ಅವರು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ರಸ್ತೆ ಮೂಲಕ ಪ್ರಯಾಣಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆವರಿಸಿದ್ದ ಕಪ್ಪು ಮೋಡಗಳು:ಪಶ್ಚಿಮ ಬಂಗಾಳದಲ್ಲಿ ಸೋಮವಾರದಿಂದ ಭಾರಿ ಮಳೆ ಹಾಗೂ ಚಂಡಮಾರುತ ಬಗ್ಗೆ ಹವಾಮಾನ ಮುನ್ಸೂಚನೆ ನೀಡಿದೆ. ಇದರ ನಡುವೆ ಜುಲೈ 8ರಂದು ಮತದಾನ ನಡೆಯಲಿರುವ ಪಂಚಾಯತ್ ಚುನಾವಣೆಯ ಪ್ರಚಾರಕ್ಕಾಗಿ ಸಿಎಂ ಮಮತಾ ಉತ್ತರ ಪಶ್ಚಿಮ ಬಂಗಾಳದ ಕೆಲ ಭಾಗಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಇಂದು ಜಲ್ಪೈಗುರಿಯಲ್ಲಿ ಭಾಷಣ ಮಾಡಿ ಅವರು ಹೆಲಿಕಾಪ್ಟರ್ನಲ್ಲಿ ಹಿಂತಿರುಗುತ್ತಿದ್ದರು.