ಕೀವ್, ರಷ್ಯಾ:ಉಕ್ರೇನ್‌ನಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ರಷ್ಯಾ ನಿರಂತರವಾಗಿ ದಾಳಿ ನಡೆಸುತ್ತಿದೆ. ಅಲ್ಲಿನ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಭಾರತೀಯ ರಾಯಭಾರಿ ಕಚೇರಿ ನಮ್ಮ ದೇಶದ ಉಕ್ರೇನ್ ವಾಸಿಗಳಿಗೆ ಸಲಹೆ ಸೂಚನೆ ನೀಡಿದೆ. ಭಾರತೀಯ ರಾಯಭಾರ ಕಚೇರಿಯು ಭಾರತದ ನಾಗರಿಕರಿಗೆ ಉಕ್ರೇನ್‌ಗೆ ಪ್ರಯಾಣಿಸದಂತೆ ಸಲಹೆ ನೀಡಿದೆ. ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರಿಗೆ ಉಕ್ರೇನ್‌ನಿಂದ ಬೇಗನೆ ಹೊರಹೋಗುವಂತೆ ರಾಯಭಾರ ಕಚೇರಿ ಸೂಚನೆ ನೀಡಿದೆ.
ಬುಧವಾರ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನ ಲುಹಾನ್ಸ್ಕ್, ಡೊನೆಟ್ಸ್ಕ್, ಜಪೋರಿಜ್ಜ್ಯಾ ಮತ್ತು ಖೆರ್ಸನ್ ಪ್ರದೇಶಗಳಲ್ಲಿ ಸಮರ ಕಾನೂನನ್ನು ಘೋಷಿಸಿದ್ದಾರೆ. ಸಮರ ಕಾನೂನಿನ ಘೋಷಣೆಯ ನಂತರ ರಷ್ಯಾದ ಎಲ್ಲ ಪ್ರದೇಶಗಳ ಮುಖ್ಯಸ್ಥರು ಹೆಚ್ಚುವರಿ ತುರ್ತು ಅಧಿಕಾರವನ್ನು ಪಡೆದಿದ್ದಾರೆ.
ವ್ಲಾಡಿಮಿರ್ ಪುಟಿನ್ ಹೇಳಿದ್ದೇನು?: ರಷ್ಯಾದ ಒಕ್ಕೂಟದ ಈ ನಾಲ್ಕು ಪ್ರದೇಶಗಳಲ್ಲಿ ಸಮರ ಕಾನೂನನ್ನು ಪರಿಚಯಿಸಲು ನಾನು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದೇನೆ ಎಂದು ರಾಷ್ಟ್ರೀಯ ಭದ್ರತಾ ಮಂಡಳಿಯ ಸಭೆಯಲ್ಲಿ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ. ಅದರ ನಂತರ ಕ್ರೆಮ್ಲಿನ್ ಗುರುವಾರದ ಆರಂಭದಿಂದ ಈ ಪ್ರದೇಶಗಳಲ್ಲಿ ಮಾರ್ಷಲ್ ಲಾ ಜಾರಿಗೊಳಿಸಲಾಗುವುದು ಎಂದು ಪ್ರಕಟಿಸಿತು.