ಆಂಧ್ರಪ್ರದೇಶ:ಇಲ್ಲಿನ ಎಲೂರಿನಲ್ಲಿ ನಿಗೂಢ ಕಾಯಿಲೆಯಿಂದ ಅನಾರೋಗ್ಯಕ್ಕೆ ಒಳಗಾಗಿರುವ ಜನರ ಸಂಖ್ಯೆ 505ಕ್ಕೆ ಏರಿಕೆಯಾಗಿದೆ.
ಇಲ್ಲಿನ ಜನರು ವರ್ಟಿಗೊ, ಫಿಟ್ಸ್, ಉಸಿರಾಟದ ತೊಂದರೆ ಮತ್ತು ತಲೆತಿರುಗುವುದು ಸೇರಿದಂತೆ ಮೂರ್ಛೆ ಹೋಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ನಿಜವಾದ ಕಾರಣವೇನು? ಎಂಬುದು ಇನ್ನೂ ತಿಳಿದುಬಂದಿಲ್ಲ.
ಈ ಹಿನ್ನೆಲೆಯಲ್ಲಿ ಈಗಾಗಲೇ ಆಸ್ಪತ್ರೆಗೆ ದಾಖಲಾದ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಸಂಬಂಧ ಅಧ್ಯಯನ ನಡೆಸಲು ಮೂವರು ಸದಸ್ಯರ ವಿಶೇಷ ವೈದ್ಯರ ತಂಡವನ್ನು ಕೇಂದ್ರ ಸರ್ಕಾರ ಮಂಗಳವಾರ ಎಲೂರಿಗೆ ಕಳುಹಿಸಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಸೋಮವಾರ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಭಾನುವಾರದಿಂದ ಮಂಗಳವಾರ ಬೆಳಗ್ಗಿನವರೆಗೆ 505 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. 17 ಜನರನ್ನು ವಿಜಯವಾಡ ಮತ್ತು ಗುಂಟೂರು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಒಂದು ಬಾರಿ ರೋಗ ಲಕ್ಷಣಗಳನ್ನು ಹೊಂದಿ ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಯಾದವರಲ್ಲಿ, ಮತ್ತೆ ಮತ್ತೆ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ.