ಮುಂಬೈ, ಮಹಾರಾಷ್ಟ್ರ :2018ರ ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಆರೋಪಿಯಾಗಿದ್ದ ಹೋರಾಟಗಾರ್ತಿ ಸುಧಾ ಭಾರದ್ವಾಜ್ಗೆ ಬಾಂಬೆ ಹೈಕೋರ್ಟ್ ಬುಧವಾರ ಡಿಫಾಲ್ಟ್ ಬೇಲ್ ನೀಡಿದೆ.
ಇದರ ಜೊತೆಗೆ ಡಿಫಾಲ್ಟ್ ಬೇಲ್ಗೆ 8 ಮಂದಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಡಿಫಾಲ್ಟ್ ಬೇಲ್ಗೆ ವಿಧಿಸಬೇಕಾದ ಷರತ್ತುಗಳನ್ನು ಡಿಸೆಂಬರ್ 8ರಂದು ವಿಚಾರಣಾ ನ್ಯಾಯಾಲಯ ನಿರ್ಧಾರ ಮಾಡಲಿದೆ.
ಕಾನೂನು ನಿಗದಿಪಡಿಸಿದ ಬಂಧನ ಪೂರ್ಣಗೊಂಡ ಬಳಿಕ ಆರೋಪಿಗಳು ಈ ಡಿಫಾಲ್ಟ್ ಜಾಮೀನು ಪಡೆಯಲು ಅರ್ಹರಿದ್ದಾರೆ. ಎಲ್ಗಾರ್ ಪರಿಷದ್ ಪ್ರಕರಣ ಆರೋಪಿಗಳಾದ ಸುಧಾ ಭಾರದ್ವಾಜ್ ಮತ್ತು 8 ಮಂದಿ ಡಿಫಾಲ್ಟ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸುಧಾ ಭಾರದ್ವಾಜ್ಗೆ ಮಾತ್ರ ಜಾಮೀನು ನೀಡಲಾಗಿದೆ.
ಏನಿದು ಎಲ್ಗಾರ್ ಪರಿಷತ್ ಪ್ರಕರಣ?:1818ರ ಜನವರಿ 1ರಂದು ನಡೆದ ಭೀಮಾ-ಕೋರೆಗಾಂವ್ ಯುದ್ಧದ 200ನೇ ವಾರ್ಷಿಕೋತ್ಸವದ ನೆನಪಿಗಾಗಿ 2017ರ ಡಿಸೆಂಬರ್ 31ರಂದು ಮಹಾರಾಷ್ಟ್ರದ ಪುಣೆಯಲ್ಲಿ 'ಎಲ್ಗರ್ ಪರಿಷತ್' ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಹೆಸರಾಂತ ಎಡಪಂಥೀಯ ಕಾರ್ಯಕರ್ತರು ಮತ್ತು ಮಾವೋವಾದಿಗಳು ಭಾಗವಹಿಸಿದ್ದರು.
ಅಂದು ನಡೆದ ಭಾಷಣಗಳು ಮರುದಿನ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು ಎಂಬ ಆರೋಪದ ಮೇಲೆ 2018ರ ಜನವರಿಯಲ್ಲಿ ಸುಧಾ ಭಾರದ್ವಾಜ್, ವೆರ್ನಾನ್ ಗೊನ್ಸಾಲ್ವಿಸ್, ವರವರ ರಾವ್, ಹನಿ ಬಾಬು, ಆನಂದ್ ತೇಲ್ತುಂಬ್ಡೆ, ಶೋಮಾ ಸೇನ್, ಗೌತಮ್ ನವ್ಲಾಖಾ ಸೇರಿದಂತೆ 15 ಮಂದಿ ವಿರುದ್ಧ ದೂರು ದಾಖಲಾಗಿತ್ತು.
ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಇವರೆಲ್ಲರನ್ನೂ ಬಂಧಿಸಲಾಗಿತ್ತು. ಅಲ್ಲದೇ ಇವರು ನಿಷೇಧಿತ ಭಯೋತ್ಪಾದಕ ಸಂಘಟನೆ ಸಿಪಿಐ (ಮಾವೋವಾದಿ)ನ ಸಕ್ರಿಯ ಸದಸ್ಯರು ಎಂದು ರಾಷ್ಟ್ರೀಯ ತನಿಖಾ ದಳ ಆರೋಪಿಸಿತ್ತು.
ಇದನ್ನೂ ಓದಿ:ಕರ್ತಾರ್ಪುರ ಗುರುದ್ವಾರದ ಬಳಿ ಫೋಟೋ ಶೂಟ್ : ಪಾಕ್ ಅಧಿಕಾರಿಗಳಿಗೆ ಸಮನ್ಸ್ ನೀಡಿದ ಭಾರತ