ನವದೆಹಲಿ:ರಾಮ್ಸಾರ್ ಪಟ್ಟಿಗೆ 11 ಭಾರತೀಯ ತಾಣಗಳನ್ನು ಸೇರಿಸಲಾಗಿದೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶದಲ್ಲಿರುವ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಆರ್ದ್ರಭೂಮಿಗಳ ಸಂಖ್ಯೆ ಇದೀಗ 75ಕ್ಕೇರಿದೆ. ಒಟ್ಟು ಪಟ್ಟಿಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದು (14 ಪ್ರದೇಶಗಳು) ನಂತರದಲ್ಲಿ ಉತ್ತರ ಪ್ರದೇಶ (10)ವಿದೆ. ಇತ್ತೀಚಿನ ಪಟ್ಟಿಯಲ್ಲಿ ತಮಿಳುನಾಡಿನಲ್ಲಿ-4 , ಒಡಿಶಾದಲ್ಲಿ-3, ಜಮ್ಮು ಮತ್ತು ಕಾಶ್ಮೀರದಲ್ಲಿ-2, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ತಲಾ ಒಂದು ತಾಣಗಳಿವೆ.
11 ಜೌಗು ಪ್ರದೇಶಗಳೆಂದರೆ:
- ಚಿತ್ರಾಂಗುಡಿ ಪಕ್ಷಿಧಾಮ
- ಸುಚಿಂದ್ರಂ ತೇರೂರ್ ವೆಟ್ಲ್ಯಾಂಡ್ ಕಾಂಪ್ಲೆಕ್ಸ್
- ವಡುವೂರ್ ಪಕ್ಷಿಧಾಮ
- ತಮಿಳುನಾಡಿನ ಕಂಜಿರಂಕುಲಂ ಪಕ್ಷಿಧಾಮ
- ಟಂಪರಾ ಸರೋವರ
- ಹಿರಾಕುಡ್ ಜಲಾಶಯ
- ಒಡಿಶಾದ ಅನ್ಸುಪಾ ಸರೋವರ
- ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಗಮ್ ವೆಟ್ಲ್ಯಾಂಡ್ ಕನ್ಸರ್ವೇಶನ್ ರಿಸರ್ವ್
- ಶಾಲ್ಬಗ್ ವೆಟ್ಲ್ಯಾಂಡ್ ಕನ್ಸರ್ವೇಶನ್ ರಿಸರ್ವ್
- ಮಹಾರಾಷ್ಟ್ರದ ಥಾಣೆ ಕ್ರೀಕ್
- ಮಧ್ಯಪ್ರದೇಶದ ಯಶವಂತ್ ಸಾಗರ್
ಈ ತಾಣಗಳು ಜೌಗು ಪ್ರದೇಶಗಳ ಸಂರಕ್ಷಣೆ ಮತ್ತು ನಿರ್ವಹಣೆ ಮತ್ತು ಅವುಗಳ ಸಂಪನ್ಮೂಲಗಳ ಬಳಕೆಗೆ ಸಹಾಯ ಮಾಡುತ್ತದೆ ಎಂದು ಪರಿಸರ ಸಚಿವಾಲಯ ಹೇಳಿದೆ. ಈ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಶನಿವಾರ ಟ್ವಿಟರ್‌ನಲ್ಲಿ ಘೋಷಣೆ ಮಾಡಿದ್ದಾರೆ. 11 ಭಾರತೀಯ ಜೌಗು ಪ್ರದೇಶಗಳಿಗೆರಾಮ್ಸಾರ್ ಮಾನ್ಯತೆ ಸಿಕ್ಕಿದೆ ಎಂದು ತಿಳಿಸಲು ಹರ್ಷವಾಗುತ್ತಿದೆ. 75 ರಾಮ್ಸಾರ್ ತಾಣಗಳು 13,26,677 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.
ರಾಮ್ಸರ್ ಪಟ್ಟಿಯು, "ಜಾಗತಿಕ ಜೈವಿಕ ವೈವಿಧ್ಯತೆಯ ಸಂರಕ್ಷಣೆಗಾಗಿ ಮತ್ತು ಅವುಗಳ ಪರಿಸರ ವ್ಯವಸ್ಥೆಯ ಘಟಕಗಳು, ಪ್ರಕ್ರಿಯೆಗಳು ಮತ್ತು ಪ್ರಯೋಜನಗಳ ನಿರ್ವಹಣೆಯ ಮೂಲಕ ಮಾನವ ಜೀವನವನ್ನು ಉಳಿಸಿಕೊಳ್ಳಲು ಮುಖ್ಯವಾದ ತೇವಭೂಮಿಗಳ ಅಂತಾರಾಷ್ಟ್ರೀಯ ಜಾಲವನ್ನು ಅಭಿವೃದ್ಧಿಪಡಿಸುವುದು ಮತ್ತು ನಿರ್ವಹಿಸುವ ಗುರಿಯನ್ನು ಹೊಂದಿವೆ. ಆ. 8 ರಂದು, ಭಾರತದಲ್ಲಿ 10 ಜೌಗು ಪ್ರದೇಶಗಳನ್ನು ಸೇರಿಸಲಾಗಿತ್ತು. 10 ಹೊಸ ತಾಣಗಳಲ್ಲಿ ತಮಿಳುನಾಡಿನ-6, ಗೋವಾ, ಕರ್ನಾಟಕ, ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ತಲಾ ಒಂದು ಪ್ರದೇಶಗಳು ಸೇರಿವೆ.
ಅವುಗಳೆಂದರೆ:
- ಕೂಂತಂಕುಳಂ ಪಕ್ಷಿಧಾಮ
- ಮನ್ನಾರ್ ಗಲ್ಫ್ ಆಫ್ ಮನ್ನಾರ್ ಮೆರೈನ್ ಬಯೋಸ್ಫಿಯರ್ ರಿಸರ್ವ್
- ವೆಂಬನ್ನೂರ್ ವೆಟ್ಲ್ಯಾಂಡ್ ಕಾಂಪ್ಲೆಕ್ಸ್
- ವೆಲ್ಲೋಡ್ ಪಕ್ಷಿಧಾಮ
- ವೇದಂತಂಗಲ್ ಪಕ್ಷಿಧಾಮ
- ತಮಿಳುನಾಡಿನ ಉದಯಮಾರ್ತಾಂಡಪುರಂ ಪಕ್ಷಿಧಾಮ
- ಒಡಿಶಾದಲ್ಲಿ ಸತ್ಕೋಸಿಯಾ ಕಮರಿ
- ಗೋವಾದ ನಂದಾ ಸರೋವರ
- ಕರ್ನಾಟಕದ ರಂಗನತಿಟ್ಟು ಪಕ್ಷಿಧಾಮ
- ಮಧ್ಯಪ್ರದೇಶದ ಸಿರ್ಪುರ ಜೌಗು ಪ್ರದೇಶ
ರಾಮ್ಸರ್ ತಾಣ ಎಂಬುದು ರಾಮ್ಸರ್ ಕನ್ವೆನ್ಷನ್ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿರುವ ತೇವಭೂಮಿ ತಾಣ. ಇದನ್ನು "ದಿ ಕನ್ವೆನ್ಷನ್ ಆನ್ ವೆಟ್ಲ್ಯಾಂಡ್ಸ್" ಎಂದೂ ಕರೆಯುತ್ತಾರೆ. ಇದು 1971ರಲ್ಲಿ ಯುನೆಸ್ಕೋದಿಂದ ಸ್ಥಾಪಿಸಲಾದ ಪರಿಸರ ಒಪ್ಪಂದವಾಗಿದ್ದು, 1975ರಲ್ಲಿ ಜಾರಿಗೆ ಬಂದಿತು. ತೇವಭೂಮಿಗಳ ಸಂರಕ್ಷಣೆ ಮತ್ತು ಅವುಗಳ ಸಂಪನ್ಮೂಲಗಳ ಸಮರ್ಥ ಸಮರ್ಥನೀಯ ಬಳಕೆಗೆ ಸಂಬಂಧಿಸಿದೆ. 1971ರಲ್ಲಿ ಇರಾನ್‌ನ ರಾಮ್ಸರ್ನಲ್ಲಿ ಸಹಿ ಹಾಕಲಾದ ಈ ಒಪ್ಪಂದಕ್ಕೆ ಭಾರತ ಫೆಬ್ರವರಿ-1, 1982 ರಂದು ಸಹಿ ಹಾಕಿತು.
ಇದನ್ನೂ ಓದಿ:ರಾಮ್ಸನ್ ಪಟ್ಟಿಗೆ ಕರ್ನಾಟಕದ ರಂಗನತಿಟ್ಟು.. ದೇಶದಲ್ಲೀಗ 64 ತಾಣಗಳಿಗೆ ಅಂತಾರಾಷ್ಟ್ರೀಯ ಮನ್ನಣೆ