ಹರಿದ್ವಾರ: ಉತ್ತರಾಖಂಡದ ಹರಿದ್ವಾರದ ಮದ್ಯದಂಗಡಿ ಬಳಿ ಬುಧವಾರ ರಾತ್ರಿ ಆನೆಗಳ ಹಿಂಡು ಪ್ರತ್ಯಕ್ಷವಾಗಿವೆ. ಮೂಲಗಳ ಪ್ರಕಾರ, ಆನೆಗಳು ಹರಿದ್ವಾರದ ಜಗದೀಶ್‌ಪುರ ಪ್ರದೇಶಕ್ಕೆ ನುಗ್ಗಿ ಲಕ್ಸಾರ್ ರಸ್ತೆಯಲ್ಲಿರುವ ಮದ್ಯದಂಗಡಿ ಬಳಿ ಅಡ್ಡಾಡುತ್ತಿದ್ದವು. ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಘಟನೆ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡ ಸ್ಥಳಕ್ಕಾಗಮಿಸಿ ಆನೆಗಳನ್ನು ಕಾಡಿನತ್ತ ಓಡಿಸಿದರು. ಈ ಬಗ್ಗೆ ಹರಿದ್ವಾರ ಅರಣ್ಯ ಸಂರಕ್ಷಣಾಧಿಕಾರಿ ದಿನೇಶ್ ನೌಟಿಯಾಲ್ ಮಾತನಾಡಿ, ಆನೆಗಳ ಓಡಾಟ ನಿರಂತರವಾಗಿ ಹೆಚ್ಚುತ್ತಿದ್ದು, ಈ ಭಾಗದಲ್ಲಿ ಗಸ್ತು ಹೆಚ್ಚಿಸಲಾಗಿದೆ. ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ತಂಡಗಳು ದಿನವಿಡೀ ಸನ್ನದ್ಧವಾಗಿದ್ದು, ನಗರ ಪ್ರದೇಶಗಳಿಗೆ ಆನೆಗಳು ಬರಲು ಕಾರಣ ಕಬ್ಬಿನ ಕೃಷಿ ಎಂದಿದ್ದಾರೆ.
ಹರಿದ್ವಾರದಲ್ಲಿ ಪ್ರಾಣಿಗಳ ಓಡಾಟ ಹೆಚ್ಚಳ.. ಕಳೆದ ಹಲವು ದಿನಗಳಿಂದ ಹರಿದ್ವಾರದಲ್ಲಿ ಪ್ರಾಣಿಗಳ ಓಡಾಟ ಹೆಚ್ಚಾಗಿದೆ. ಗಂಗಾನದಿ ದಡದಲ್ಲಿರುವ ರಾಜಾಜಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ಕಂಖಾಲ್ ದಡದಲ್ಲಿರುವ ಬಿಹೆಚ್‌ಇಎಲ್‌ನಲ್ಲಿ ಆನೆಗಳು ಮತ್ತು ಚಿರತೆಗಳ ಸಂಚಾರದಿಂದಾಗಿ ಸ್ಥಳೀಯರಲ್ಲಿ ಸಂಚಲನ ಉಂಟಾಗಿದೆ. ಅಲ್ಲದೇ, ದಟ್ಟಣೆಯ ರಸ್ತೆಗಳಲ್ಲಿಯೂ ಆನೆಗಳು ಕಾಣಿಸಿಕೊಂಡಿವೆ.
ರಾಜಾಜಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್..ಇದಕ್ಕೂ ಮುನ್ನ ಆನೆಯೊಂದು ಹರಿದ್ವಾರ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 6 ರ ರೈಲ್ವೆ ಹಳಿಯನ್ನು ಪ್ರವೇಶಿಸಿತ್ತು. ರೈಲ್ವೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಆನೆ ಅಡ್ಡಾಡುತ್ತಲೇ ಇತ್ತು. ಸಾಕಷ್ಟು ಪ್ರಯತ್ನದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ವಾಪಸ್ ಕಳುಹಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಭೀತಿಯನ್ನು ಉಂಟುಮಾಡಿದೆ. ಅರಣ್ಯಾಧಿಕಾರಿಗಳ ಪ್ರಕಾರ, ಆನೆಯು ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದ ಹರಿದ್ವಾರ ಶ್ರೇಣಿಯಿಂದ ಮಾನಸಾ ದೇವಿ ಮಾರ್ಗವಾಗಿ ನಿಲ್ದಾಣವನ್ನು ಪ್ರವೇಶಿಸಿತ್ತು.