ಉತ್ತರಾಖಂಡ:ಅಳಿವಿನಂಚಿನಲ್ಲಿರುವ ಬಂಗಾಳ ಹುಲಿಗಳ ಸಂರಕ್ಷಿತ ತಾಣವಾಗಿರುವ ವಿಶ್ವವಿಖ್ಯಾತ ಜಿಮ್ ಕಾರ್ಬೆಟ್ ಅಭಯಾರಣ್ಯದಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಆನೆ ಗೋಮತಿ ಮತ್ತು ಕಾವಲು ಶ್ವಾನ ಇಂದು (ಅಕ್ಟೋಬರ್ 4) ತಮ್ಮ ಕೆಲಸದಿಂದ ನಿವೃತ್ತಿಯಾಗಿದ್ದು, ಸಕಲ ಗೌರವಗಳಿಂದ ಬೀಳ್ಕೊಡಲಾಯಿತು.
ಉದ್ಯಾನವನದಲ್ಲಿ ಅರಣ್ಯ ನಾಶ ತಡೆ ಮತ್ತು ವನ್ಯಜೀವಿಗಳ ರಕ್ಷಣೆಗೆ ಉದ್ಯೋಗಿಗಳ ಜೊತೆಗೆ, ಆನೆಗಳು ಮತ್ತು ಕಾವಲು ನಾಯಿಗಳನ್ನು ನಿಯೋಜಿಸಲಾಗಿದೆ. ಅವುಗಳಲ್ಲಿ ಆನೆ ಮತ್ತು ನಾಯಿ ಈಗ ವಯೋಸಹಜವಾಗಿ ಜವಾಬ್ದಾರಿಯಿಂದ ಬಿಡುಗಡೆ ಹೊಂದಿವೆ. ಕಾಡುಗಳಲ್ಲಿ ಗಸ್ತು ತಿರುಗಲು, ಬೇಟೆಗಾರರಿಂದ ವನ್ಯಜೀವಿಗಳನ್ನು ರಕ್ಷಿಸಲು ಇವುಗಳನ್ನು ಕಾವಲು ಇಡಲಾಗಿತ್ತು. ಜನರ ಪ್ರವಾಸದ ವೇಳೆ ಹುಲಿ ಅಥವಾ ಚಿರತೆಗಳು ದಾಳಿ ಮಾಡದಂತೆ ಇವುಗಳನ್ನು ಬಳಸಲಾಗುತ್ತಿತ್ತು.
47 ವರ್ಷಗಳ ಸೇವೆ ಕೊನೆ:ಗೋಮತಿ ಆನೆ ಕಳೆದ 47 ವರ್ಷಗಳಿಂದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಸೇವೆಯಲ್ಲಿ ಹಗಲಿರುಳು ನಿರತವಾಗಿತ್ತು. ಕಾವಲು ಶ್ವಾನ 8 ವರ್ಷಗಳಿಂದ ಅರಣ್ಯವನ್ನು ಕಾವಲು ಕಾಯುತ್ತಿದೆ. ಎಲಿಫೆಂಟ್ ಗೈಡ್ ಲೈನ್ ಪ್ರಕಾರ, ಯಾವುದೇ ಆನೆಯನ್ನು 65 ವರ್ಷ ವಯಸ್ಸಿನವರೆಗೆ ಮಾತ್ರ ಕೆಲಸಗಳಲ್ಲಿ ಬಳಸಿಕೊಳ್ಳಬಹುದಾಗಿದೆ. ಗೋಮತಿ ಆನೆಗೆ ಈಗ 65 ವರ್ಷ ವಯಸ್ಸಾಗಿದೆ. ಹೀಗಾಗಿ ಗೋಮತಿಗೆ ವಿಶ್ರಾಂತಿ ನೀಡಲಾಗುತ್ತಿದೆ. ಈ ಆನೆ ತನ್ನ 18 ನೇ ವಯಸ್ಸಿನಲ್ಲಿಯೇ ಲಖನೌನಿಂದ ಜಿಮ್ ಕಾರ್ಬೆಟ್ ಅಭಯಾರಣ್ಯಕ್ಕೆ ಕರೆತರಲಾಗಿತ್ತು. ಅಂದಿನಿಂದ ಸೇವೆಯಲ್ಲಿತ್ತು.