ಇಡುಕ್ಕಿ (ಕೇರಳ): ಕೇರಳದಲ್ಲಿ ಆನೆಯೊಂದು ಸ್ಥಳೀಯರಿಗೆ ವಿಪರೀತ ನಿರಂತರ ತೊಂದರೆ ನೀಡುತ್ತಿದೆ. ಅಕ್ಕಿ, ಗೋಧಿ ಮತ್ತು ಸಕ್ಕರೆಯಂತಹ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಪಡಿತರ ಅಂಗಡಿಗೆ ನುಗ್ಗುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ ಸುಮಾರು 10 ಬಾರಿ ದಾಳಿ ಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ತೊಂಡಿಮಲ ಪನ್ನಿಯಾರ್ ಎಚ್‌ಎಂಎಲ್ ಎಸ್ಟೇಟ್ ಒಳಗಿನ ಪಡಿತರ ಅಂಗಡಿಗೆ ಆನೆ ನುಗ್ಗಿದೆ. ನಾಲ್ಕು ದಿನಗಳ ಅಂತರದಲ್ಲಿ ಮೂರನೇ ಬಾರಿಗೆ ಅರಿಕೊಂಬನ ಎಂಬ ಆನೆ ಅಂಗಡಿಯ ಮೇಲೆರಗಿ ಧ್ವಂಸಗೊಳಿಸಿದೆ. ಎಸ್ಟೇಟ್ ಒಳಗಿನ ಪಡಿತರ ಅಂಗಡಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಕಾಡುಪ್ರಾಣಿಗಳ ಉಪಟಳ ಮತ್ತು ಭದ್ರತೆ ಇಲ್ಲದ ಕಟ್ಟಡದಲ್ಲಿ ಇನ್ನು ಮುಂದೆ ಪಡಿತರ ಅಂಗಡಿ ನಡೆಸಲು ಸಾಧ್ಯವಿಲ್ಲ ಎಂದು ಮಾಲೀಕರು ತಿಳಿಸಿದ್ದಾರೆ. ಜನಪ್ರತಿನಿಧಿಗಳು, ನಾಗರಿಕ ಸರಬರಾಜು ಅಧಿಕಾರಿಗಳು ಚರ್ಚಿಸಿ ಸ್ಥಳಾಂತರಿಸಲು ನಿರ್ಧರಿಸಿದ್ದಾರೆ.
1966ರಿಂದ ಪನ್ನಿಯಾರ್‌ನಲ್ಲಿ ಪಡಿತರ ಅಂಗಡಿಯು ಖಾಸಗಿ ಕಂಪನಿ ಒಡೆತನದ ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಲಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಲ್ಲು-ಮಣ್ಣು, ತಗಡಿನ ಶೀಟ್‌ಗಳ ಕಟ್ಟಡದ ಮೇಲೆ ಒಂಟಿ ಸಲಗ ಅಟ್ಯಾಕ್ ಮಾಡಿ ನಾಶಪಡಿಸಿದೆ ಎನ್ನುತ್ತಾರೆ ಸ್ಥಳೀಯರು. ಅಂಗಡಿ ಮಾಲೀಕ ಪಿ.ಎಲ್.ಆಂಟನಿ ಮಾತನಾಡಿ, "ಅರಿಕೊಂಬ ಎಂಬ ಆನೆ 15 ತಿಂಗಳಲ್ಲಿ ಕನಿಷ್ಠ 10 ಬಾರಿ ಅಂಗಡಿಗೆ ನುಗ್ಗಿದೆ. ಮೇಲ್ಛಾವಣಿ, ಗೋಡೆ ಒಡೆದು ಅಕ್ಕಿ ಮೂಟೆಗಳನ್ನು ತನ್ನ ಸೊಂಡಿಲಿನಿಂದ ಎಳೆದು ತಿಂದಿದೆ. ಪ್ರತಿ ಬಾರಿ ಅಂಗಡಿ ಕೆಡವಿದಾಗ ಕಲ್ಲು, ಮಣ್ಣಿನಿಂದ ಮತ್ತೆ ಗೋಡೆ ಕಟ್ಟುವುದು ನಮಗೆ ವಾಡಿಕೆಯಾಗಿದೆ. ಪ್ರಾಣ ಪಣಕ್ಕಿಟ್ಟು ಅಂಗಡಿಯಲ್ಲಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ಇದೆ" ಎಂದರು.