ಮುಜಾಫರ್‌ಪುರ (ಬಿಹಾರ):ಬಿಹಾರದ ಮುಜಾಫರ್‌ಪುರದಲ್ಲಿ ಹುತಾತ್ಮ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರಿಗೆ ಬಿಲ್ ಪಾವತಿಸುವಂತೆ ವಿದ್ಯುತ್ ಇಲಾಖೆ ನೋಟಿಸ್ ನೀಡಿದೆ. ಒಂದು ವಾರದೊಳಗೆ ವಿದ್ಯುತ್ ಬಿಲ್ ಜಮಾ ಮಾಡಿ, ಇಲ್ಲದಿದ್ದರೆ ನಿಮ್ಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರಿಗೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ರೀತಿ ನೋಟಿಸ್ ಕಳುಹಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
1 ಲಕ್ಷ 36 ಸಾವಿರ ವಿದ್ಯುತ್ ಬಿಲ್ ಬಾಕಿ:ಮುಜಾಫರ್‌ಪುರದ ಕಂಪನಿಬಾಗ್ ಎಂಬ ಪ್ರದೇಶದಲ್ಲಿ ದೇಶದ ಇಬ್ಬರು ಹುತಾತ್ಮರಾದ ಖುದಿರಾಮ್ ಬೋಸ್ ಮತ್ತು ಪ್ರಫುಲ್ ಚಂದ್ ಚಾಕಿ ಅವರ ಸ್ಮಾರಕವಿದೆ. ಉತ್ತರ ಬಿಹಾರದ ವಿದ್ಯುತ್ ವಿತರಣಾ ಕಂಪನಿಯಿಂದ ಈ ಸ್ಮಾರಕದಲ್ಲಿ ವಿದ್ಯುತ್ ಸಂಪರ್ಕವನ್ನು ಪೂರೈಸಲಾಗುತ್ತದೆ. ಈ ಸ್ಮಾರಕವನ್ನು ನೋಡಿಕೊಳ್ಳುತ್ತಿರುವ ಸಂಸ್ಥೆ ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಈಗ ಅದರ ಬಿಲ್ 1 ಲಕ್ಷದ 36 ಸಾವಿರದ 943 ರೂ.ಗೆ ಏರಿಕೆ ಆಗಿದೆ.
ನೋಟಿಸ್‌ನಲ್ಲಿ ಹುತಾತ್ಮರ ಹೆಸರು ಉಲ್ಲೇಖ: ಇಷ್ಟು ದೊಡ್ಡ ಮೊತ್ತ ಬಾಕಿ ಇರುವ ಕಾರಣ ವಿದ್ಯುತ್ ಇಲಾಖೆ ಹುತಾತ್ಮ ಯೋಧರಿಗೆ ನೋಟಿಸ್ ಜಾರಿ ಮಾಡಿದೆ. ಒಂದು ವಾರದಲ್ಲಿ ಬಿಲ್ ಜಮಾ ಮಾಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಈಗ ಇಂತಹ ಪರಿಸ್ಥಿತಿಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ವಿದ್ಯುತ್ ಕಡಿತದ ಕುರಿತು ನೋಟಿಸ್ ಜಾರಿ ಮಾಡಿದ್ದರಿಂದ ಸ್ಥಳೀಯರು, ವಿದ್ಯುತ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಮಾರಕಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರೆ ಸಾರ್ವಜನಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ಕೂಡಾ ನೀಡಿದ್ದಾರೆ.