ಶಾಮ್ಲಿ( ಉತ್ತರಪ್ರದೇಶ):ವಿದ್ಯುತ್ ಸೌಲಭ್ಯವನ್ನೇ ನೀಡದೇ ಗ್ರಾಮದ ಜನರಿಗೆ ಸಾವಿರಾರು ರೂಪಾಯಿಗಳ ಬಿಲ್ ನೀಡಿ ಇಲಾಖೆ ಶಾಕ್ ನೀಡಿದೆ. ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ವಿದ್ಯುತ್ ಇಲಾಖೆಯ ಬೇಜವಾಬ್ದಾರಿತನ ಕಾರಣ ಎಂಬ ಮಾತು ಕೇಳಿ ಬಂದಿದೆ. ಖೋಕ್ಸಾ, ಅಲಾವುದ್ದೀನ್‌ಪುರ, ದುದ್ಲಿ, ಡೇರಾ ಭಾಗೀರಥ್, ನಯಾ ಬನ್ಸ್, ಮಸ್ತಗಢ, ಜತನ್, ಖಾನ್‌ಪುರ, ಅಹಮದ್‌ಗಢ, ಖೇಡಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸಿಸುತ್ತಿರುವ ಬವಾರಿಯಾ ಜನಾಂಗದ ಜನರ ಮನೆಗೆ ಹತ್ತು ವರ್ಷಗಳ ಹಿಂದೆ ಉಚಿತ ವಿದ್ಯುತ್ ಸಂಪರ್ಕದ ಹೆಸರಿನಲ್ಲಿ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಿದ್ದಾರೆ.
ವಿದ್ಯುತ್ ಮೀಟರ್ ಅಳವಡಿಸಿದರೂ, ವಿದ್ಯುತ್ ಸಂಪರ್ಕ ಮಾತ್ರ ಅವರಿಗೆ ಇನ್ನೂ ಕನಸು ಆಗಿ ಉಳಿದಿದೆ. ಆದರೆ, ಇಲಾಖೆ ಮಾತ್ರ ಸಾವಿರಾರು ರೂ ಮೊತ್ತದ ವಿದ್ಯುತ್ ಬಿಲ್ ನೀಡಿದೆ. ಇಲಾಖೆ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಖೋಕ್ಸಾ ಗ್ರಾಮದ ಮಹಿಳೆ ಸರೋಜ ದೇವಿ, ಮೂರು ವರ್ಷಗಳ ಹಿಂದೆ ಉಚಿತ ಸಂಪರ್ಕ ನೀಡುವುದಾಗಿ ಮೀಟರ್ ಅನ್ನು ಅಳವಡಿಸಲಾಗಿದೆ.
ಮನೆಯಲ್ಲಿ ದೊಡ್ಡ (ಅವಿಭಕ್ತ) ಕುಟಂಬ ವಾಸ ಮಾಡುತ್ತಿದ್ದು, ನಾಲ್ಕು ಮೀಟರ್ ಅಳವಡಿಸಲಾಗಿದೆ. ಈಗ ಅವರು ಪ್ರತಿ ಮೀಟರ್ಗೆ 50 ಸಾವಿರ ರೂ ಅನ್ನು ಕಟ್ಟುವಂತೆ ಪದೇ ಪದೇ ಮನೆಗೆ ಭೇಟಿ ನೀಡಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.