ಬೀಡ್(ಮಹಾರಾಷ್ಟ್ರ):ಎಲೆಕ್ಟ್ರಿಕಲ್ ವಾಟರ್ ಹೀಟರ್ನಿಂದ ವಿದ್ಯುತ್ ಶಾಕ್ ಹೊಡೆದು ದಂಪತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಿಂಪಲಗಾಂವ್ನಲ್ಲಿ ಸಂಭವಿಸಿದೆ. ಜ್ಞಾನೇಶ್ವರ್ ಸುರವ್ಸೆ ಹಾಗೂ ಸಿಂಧೂಬಾಯಿ ಸುರವ್ಸೆ ಮೃತ ದಂಪತಿ. ಇಂದು ಮುಂಜಾನೆ ಮೂರು ಗಂಟೆ ಸುಮಾರಿಗೆ ಜ್ಞಾನೇಶ್ವರ್ ಬಾತ್ ರೂಂನಲ್ಲಿ ವಾಟರ್ ಹೀಟರ್ ಅಳವಡಿಸಿ ಬ್ರಶ್ ಮಾಡಿದ್ದಾರೆ. ಬಳಿಕ ಸ್ನಾನಕ್ಕೆ ತೆರಳಿದಾಗ ಹೀಟರ್ನಿಂದ ಶಾಕ್ ಹೊಡೆದಿದೆ. ಪತಿಯ ಕಿರುಚಾಟ ಕೇಳಿ ಪತ್ನಿ ಸಿಂಧೂಬಾಯಿ ಅವರ ಬಳಿ ಓಡಿ ಹೋಗಿದ್ದಾರೆ. ಈ ವೇಳೆ ಅವರಿಗೂ ವಿದ್ಯುತ್ ಸ್ಪರ್ಶವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ಹಾಗೂ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಮೃತರ ಮಗಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ದಂಪತಿ ಅತ್ಯಂತ ಶ್ರಮಜೀವಿಗಳು. ಬಡ ಕುಟುಂಬದವರಾದ ಇವರು, ಹೋಟೆಲ್ ನಡೆಸಿ ಅದರಿಂದ ಬರುವ ಆದಾಯದಿಂದ ಜೀವನ ಸಾಗಿಸುತ್ತಿದ್ದರು. ಈ ಭಾಗದ ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಹಿಂದಿನ ಕಾಲದ ತರಹ ಈಗ ನೀರು ಕಾಯಿಸಲು ಸೌದೆ ಒಲೆಗಳು ಇಲ್ಲ. ನಗರ ಪ್ರದೇಶದಲ್ಲಿರುವ ಜನರಿಗೆ ಹಾಗೆಂದರೇನು ಎಂದು ಗೊತ್ತೇ ಇರುವುದಿಲ್ಲ. ಈಗೇನಿದ್ದರೂ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಯುಗ. ಸಣ್ಣ ಮನೆಗಳಿಂದ ಹಿಡಿದು ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಲ್ಲಿ ಕೂಡ ನೀರು ಬಿಸಿ ಮಾಡಿಕೊಳ್ಳಲು ವಾಟರ್ ಹೀಟರ್ ಅಥವಾ ಗೀಜರ್ ಬಳಕೆ ಆಗುತ್ತಿದೆ. ಇವುಗಳು ಉಪಯುಕ್ತವಾದರೂ ಬಳಸುವಾಗ ಎಚ್ಚರಿಕೆ ಅಗತ್ಯ.
ಇದನ್ನೂ ಓದಿ:ತಂದೆಯೊಂದಿಗೆ ಐಸ್‌ಕ್ರೀಂ ತಿನ್ನಲು ಹೋದ ಮಗಳು: ಅಂಗಡಿಯಲ್ಲಿ ಫ್ರಿಡ್ಜ್ನ ಶಾಕ್ನಿಂದ ಸಾವು