ಜಲಗಾಂವ್ (ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ ಕಳೆದ ವರ್ಷ ಬಂಡಾಯವೆದ್ದ 16 ಶಿವಸೇನೆಯ (ಶಿಂಧೆ ಪಕ್ಷದ) ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದೆ. ಈ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಶಿಂಧೆ ಸರ್ಕಾರ ಶೀಘ್ರದಲ್ಲೇ ಪತನಗೊಳ್ಳಲಿದ್ದು, ಯಾವುದೇ ಸಮಯದಲ್ಲಿ ಬೇಕಾದರೂ ಚುನಾವಣೆ ನಡೆಯಬಹುದು ಎಂದಿದ್ದಾರೆ.
ಭಾನುವಾರ ಜಲಗಾಂವ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ, "ಮಹಾರಾಷ್ಟ್ರದಲ್ಲಿ ಚುನಾವಣೆಗಳು ಯಾವಾಗ ಬೇಕಾದರೂ ನಡೆಯಬಹುದು, ನಾವು ಸಿದ್ಧರಾಗಿದ್ದೇವೆ. 16 ಶಿಂಧೆ ಪಕ್ಷದ ಶಾಸಕರ ಅನರ್ಹ ವಿಷಯವು ಸುಪ್ರೀಂ ಕೋರ್ಟ್ನಲ್ಲಿದೆ ಮತ್ತು ಅಂತಿಮ ತೀರ್ಪು ನಮ್ಮ ಪರವಾಗಿ ಬರುತ್ತದೆ ಎಂದು ಆಶಾದಾಯಕವಾಗಿದ್ದೇವೆ. ಕೋರ್ಟ್ ತೀರ್ಪಿನ ಬಳಿಕ ಏನು ಬೇಕಾದರೂ ಆಗಬಹುದು" ಎಂದರು.
ಬಳಿಕ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ ಉದ್ಧವ್, "ನಿಮಗೆ ನಿಮ್ಮದೇ ಆದ ಯಾವುದೇ ಆದರ್ಶವಿಲ್ಲ. ಆದ್ದರಿಂದ ನೀವು ಇತರರ ಆದರ್ಶಗಳನ್ನು ಮತ್ತು ಬೇರೆಯವರೊಬ್ಬರ ತಂದೆ-ತಾಯಿಯ ಹೆಸರನ್ನು ಕಸಿದುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಿ. ನಾನು ಈ ಹಿಂದೆಯೇ ಬಿಜೆಪಿಗೆ ಸವಾಲು ಹಾಕಿದ್ದೇನೆ. ಮುಂಬರುವ ಚುನಾವಣೆಯನ್ನು ಏಕನಾಥ್ ಶಿಂಧೆ ನೇತೃತ್ವದಲ್ಲಿ ಸ್ಪರ್ಧಿಸುವುದಾಗಿ ಘೋಷಿಸಲು ನಾನು ಬಿಜೆಪಿ ಅವರಿಗೆ ಧೈರ್ಯ ನೀಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ :ಆಟೋರಿಕ್ಷಾ ಮರ್ಸಿಡಿಸ್ ಕಾರನ್ನು ಮೀರಿಸಿದೆ: ಉದ್ಧವ್ ಠಾಕ್ರೆಗೆ ಸಿಎಂ ಶಿಂದೆ ತಿರುಗೇಟು