ಕರ್ನಾಟಕ

karnataka

ETV Bharat / bharat

ವಿಧಾನಸಭೆ ಚುನಾವಣೆ: ಗೋವಾ, ಉತ್ತರಾಖಂಡ, ಉತ್ತರಪ್ರದೇಶದಲ್ಲಿಂದು ಮತದಾನ- ಕಣದಲ್ಲಿ ಯಾರ್ಯಾರು?

ಉತ್ತರಾಖಂಡದಲ್ಲಿ 11,697 ಮತಗಟ್ಟೆಗಳಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. 2000ರಲ್ಲಿ ರಚನೆಯಾದ ನಂತರ ಗುಡ್ಡಗಾಡು ರಾಜ್ಯದಲ್ಲಿ ನಡೆಯಲಿರುವ ಐದನೇ ವಿಧಾನಸಭಾ ಚುನಾವಣೆ ಇದಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ, ಅವರ ಸಂಪುಟ ಸಹೋದ್ಯೋಗಿಗಳಾದ ಸತ್ಪಾಲ್ ಮಹಾರಾಜ್, ಸುಬೋಧ್ ಉನಿಯಾಲ್, ಅರವಿಂದ್ ಪಾಂಡೆ, ಧನ್ ಸಿಂಗ್ ರಾವತ್ ಮತ್ತು ರೇಖಾ ಆರ್ಯ ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಕಣದಲ್ಲಿರುವ ಕೆಲವು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ..

Elections 2022: Goa, Uttarakhand, Uttar Pradesh go to polls tomorrow
ಗೋವಾ, ಉತ್ತರಾಖಂಡ, ಉತ್ತರ ಪ್ರದೇಶದಲ್ಲಿ ನಾಳೆ ಮತದಾನ

By

Published : Feb 13, 2022, 10:32 PM IST

Updated : Feb 14, 2022, 6:39 AM IST

ನವದೆಹಲಿ:ಪಂಚರಾಜ್ಯ ಚುನಾವಣೆ ಕಣ ರಂಗೇರಿದ್ದು, ಬೆಳಗ್ಗೆ ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮತದಾನದ ಭಾಗವಾಗಿ 55 ಸ್ಥಾನಗಳಿಗೆ ವೋಟಿಂಗ್​ ನಡೆಯಲಿದೆ. ಜೊತೆಗೆ ಗೋವಾ ಮತ್ತು ಉತ್ತರಾಖಂಡದ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಮತದಾನವಿದೆ. ಮುಖ್ಯಮಂತ್ರಿಗಳಾದ ಪುಷ್ಕರ್ ಸಿಂಗ್ ಧಾಮಿ, ಪ್ರಮೋದ್ ಸಾವಂತ್, ಮಾಜಿ ಸಿಎಂ ಹರೀಶ್ ರಾವತ್ ಮತ್ತು ಎಸ್‌ಪಿ ನಾಯಕ ಅಜಂ ಖಾನ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.

ಈ ಬಾರಿಯ ಚುನಾವಣೆ ಮೋದಿ ಸರ್ಕಾರಕ್ಕೆ ಅಗ್ನಿಪರೀಕ್ಷೆ:11 ಲಕ್ಷಕ್ಕೂ ಹೆಚ್ಚು ಮತದಾರರನ್ನು ಹೊಂದಿರುವ ಕರಾವಳಿ ರಾಜ್ಯ ಗೋವಾದಲ್ಲಿ 40 ವಿಧಾನಸಭಾ ಸ್ಥಾನಗಳಿಂದ 301 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 81 ಲಕ್ಷ ಮತದಾರರನ್ನು ಹೊಂದಿರುವ ಉತ್ತರಾಖಂಡದ 70 ಸ್ಥಾನಗಳಿಗೆ 152 ಸ್ವತಂತ್ರರು ಸೇರಿದಂತೆ 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಾಂಪ್ರದಾಯಿಕವಾಗಿ ಎರಡು ರಾಜ್ಯಗಳು ದ್ವಿಧ್ರುವಿ ರಾಜಕೀಯವನ್ನು ಕಂಡಿವೆ, ಆದರೆ ಈ ಬಾರಿ ಎರಡೂ ರಾಜ್ಯಗಳಲ್ಲಿ ಬಹುಕೋನ ಸ್ಪರ್ಧೆ ಇದೆ. ಆಮ್ ಆದ್ಮಿ ಪಕ್ಷವೂ ಕೂಡ ಈ ರಾಜ್ಯಗಳ ಚುನಾವಣೆಗೆ ಪ್ರವೇಶಿಸಿದೆ.

ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಬಾರಿ ಪ್ರತಿ ರಾಜ್ಯದಲ್ಲಿ 'ಸಖಿ' ಅಥವಾ ಪಿಂಕ್ ಮತಗಟ್ಟೆ ಎಂದು ಕರೆಯಲ್ಪಡುವ ಸುಮಾರು 100 ಮಹಿಳಾ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಗೆ ಮುನ್ನುಡಿ ಎಂದೇ ಬಿಂಬಿತವಾಗಿರುವ ಉತ್ತರ ಪ್ರದೇಶ ಚುನಾವಣೆ ಕಣದಲ್ಲಿ, ಸಹರಾನ್‌ಪುರ, ಬಿಜ್ನೋರ್, ಮೊರಾದಾಬಾದ್, ಸಂಭಾಲ್, ರಾಂಪುರ, ಅಮ್ರೋಹಾ, ಬುಡೌನ್, ಬರೇಲಿ ಮತ್ತು ಶಹಜಹಾನ್‌ಪುರ ಕ್ಷೇತ್ರಗಳಲ್ಲಿ ಎರಡನೇ ಹಂತದ ಚುನಾವಣೆ ಇದೆ. 55 ಸ್ಥಾನಗಳಿಂದ 586 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಚುನಾವಣೆ ಘೋಷಣೆಯಾದ ಬಳಿಕ ಆರಂಭದಲ್ಲಿ ಕೋವಿಡ್​​ ನಿರ್ಬಂಧಗಳಿಂದ ಪ್ರಚಾರದ ಮೇಲೆ ಪರಿಣಾಮ ಬೀರಿದ್ದರೂ, ಚುನಾವಣಾ ಆಯೋಗವು ಕಳೆದ ಎರಡು ವಾರಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಿತ್ತು. ಕೋವಿಡ್ ಶಿಷ್ಟಾಚಾರ ಅನುಸರಿಸಿ ಮತದಾನ ನಡೆಸಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಖಂಡದಲ್ಲಿ ಮತ್ತೆ ಗದ್ದುಗೆಗೇರಲು ಬಿಜೆಪಿ ಕಸರತ್ತು:ಉತ್ತರಾಖಂಡದಲ್ಲಿ 11,697 ಮತಗಟ್ಟೆಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. 2000ರಲ್ಲಿ ರಚನೆಯಾದ ನಂತರ ಗುಡ್ಡಗಾಡು ರಾಜ್ಯದಲ್ಲಿ ನಡೆಯಲಿರುವ ಐದನೇ ವಿಧಾನಸಭಾ ಚುನಾವಣೆ ಇದಾಗಿದೆ. ಸಿಎಂ ಪುಷ್ಕರ್ ಸಿಂಗ್ ಧಾಮಿ, ಅವರ ಸಂಪುಟ ಸಹೋದ್ಯೋಗಿಗಳಾದ ಸತ್ಪಾಲ್ ಮಹಾರಾಜ್, ಸುಬೋಧ್ ಉನಿಯಾಲ್, ಅರವಿಂದ್ ಪಾಂಡೆ, ಧನ್ ಸಿಂಗ್ ರಾವತ್ ಮತ್ತು ರೇಖಾ ಆರ್ಯ ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಮದನ್ ಕೌಶಿಕ್ ಕಣದಲ್ಲಿರುವ ಕೆಲವು ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಮಾಜಿ ಸಚಿವ ಯಶಪಾಲ್ ಆರ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್ ಮತ್ತು ನಾಲ್ಕನೇ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಪ್ರೀತಮ್ ಸಿಂಗ್ ಅವರ ಭವಿಷ್ಯ ಚುನಾವಣೆಯಲ್ಲಿ ನಿರ್ಧಾರವಾಗಲಿದೆ.

ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸಿರುವ ಬಿಜೆಪಿ, ರಾಜ್ಯದಲ್ಲಿ ನಡೆಯುತ್ತಿರುವ ರಸ್ತೆ, ರೈಲು ಮತ್ತು ವಿಮಾನ ಸಂಪರ್ಕ ಯೋಜನೆಗಳು ಮತ್ತು ಪುನರ್ನಿರ್ಮಾಣದ ಜೊತೆಗೆ ಪೈಪ್‌ಲೈನ್‌ನಲ್ಲಿರುವ ಯೋಜನೆಗಳ ಮೂಲಕ ಮತಯಾಚಿಸಿದೆ. ಮುಂದಿನ ಐದು ವರ್ಷಗಳಲ್ಲಿ ರಾಜ್ಯವು ಅಡೆತಡೆಯಿಲ್ಲದ ಅಭಿವೃದ್ಧಿ ಹೊಂದಲು ಡಬಲ್ ಇಂಜಿನ್ ಸರ್ಕಾರದ ಹೆಸರಿನಲ್ಲಿ ಬಿಜೆಪಿ ಮತ ಕೇಳಿದೆ.

ಮತ್ತೊಂದೆಡೆ, ಕಾಂಗ್ರೆಸ್ 2017ರ ವಿಧಾನಸಭಾ ಚುನಾವಣೆಯಲ್ಲಿ ಸೋಲಿನ ನಂತರ ಕಳೆದುಕೊಂಡ ನೆಲೆ ಮರಳಿ ಪಡೆಯಲು ಪ್ರಯತ್ನಿಸುತ್ತಿದೆ. ಹಣದುಬ್ಬರ, ನಿರುದ್ಯೋಗ ಮತ್ತು ತ್ವರಿತ ಅನುಕ್ರಮವಾಗಿ ಮುಖ್ಯಮಂತ್ರಿಗಳ ಬದಲಾವಣೆ ಸಮಸ್ಯೆಗಳನ್ನು ಎತ್ತಿ ತೋರಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರಾಖಂಡದ ಒಟ್ಟು 70 ಸ್ಥಾನಗಳ ಪೈಕಿ ಬಿಜೆಪಿ 57ರಲ್ಲಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕೇವಲ 11ಕ್ಕೆ ಸೀಮಿತವಾಗಿದ್ದರೆ, ಎರಡು ಸ್ಥಾನಗಳು ಪಕ್ಷೇತರರ ಪಾಲಾಗಿವೆ.

ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿರುವ ಎಎಪಿ, ಪ್ರತಿ ಮನೆಗೆ 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್, 18 ವರ್ಷ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,000 ರೂ, ಪ್ರತಿ ಮನೆಗೆ ಉದ್ಯೋಗ ಮತ್ತು ರೂ 5,000 ನಿರುದ್ಯೋಗ ಭತ್ಯೆ ಸೇರಿದಂತೆ ಹಲವು ಉಚಿತ ಕೊಡುಗೆಗಳ ಭರವಸೆ ನೀಡಿದೆ.

ಗೋವಾದಲ್ಲಿ 40 ಕ್ಷೇತ್ರಗಳಲ್ಲಿ ಫೈಟ್​:ಗೋವಾದ ಪ್ರಮುಖ ಅಭ್ಯರ್ಥಿಗಳಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ (ಬಿಜೆಪಿ), ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ (ಕಾಂಗ್ರೆಸ್), ಮಾಜಿ ಸಿಎಂಗಳಾದ ಚರ್ಚಿಲ್ ಅಲೆಮಾವೊ (ಟಿಎಂಸಿ), ರವಿ ನಾಯ್ಕ್ (ಬಿಜೆಪಿ), ಲಕ್ಷ್ಮೀಕಾಂತ್ ಪರ್ಸೇಕರ್ (ಸ್ವತಂತ್ರ), ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ (ಜಿಎಫ್​ಪಿ) ಮತ್ತು ಸುದಿನ್ ಧವಲಿಕರ್ (ಎಂಜಿಪಿ), ದಿ. ಮಾಜಿ ಸಿಎಂ ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ ಪರಿಕ್ಕರ್ ಮತ್ತು ಆಪ್​ನ ಸಿಎಂ ಅಭ್ಯರ್ಥಿ ಅಮಿತ್ ಪಾಲೇಕರ್ ಅವರನ್ನು ಎದುರಿಸುತ್ತಾರೆ. ಕಾಂಗ್ರೆಸ್ ಮತ್ತು ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್‌ಪಿ) ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದ್ದರೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ (ಎಂಜಿಪಿ) ಯೊಂದಿಗೆ ಚುನಾವಣೆ ಎದುರಿಸಲು ಕೈಜೋಡಿಸಿದೆ.

ಶಿವಸೇನೆ ಮತ್ತು ಎನ್‌ಸಿಪಿ ಕೂಡ ತಮ್ಮ ಚುನಾವಣಾ ಪೂರ್ವ ಮೈತ್ರಿಯನ್ನು ಘೋಷಿಸಿದ್ದವು. ಆದರೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸ್ವಂತಂತ್ರವಾಗಿ ಸ್ಪರ್ಧಿಸುತ್ತಿದೆ. 68 ಸ್ವತಂತ್ರ ಅಭ್ಯರ್ಥಿಗಳಲ್ಲದೆ, ಕ್ರಾಂತಿಕಾರಿ ಗೋವಾಗಳು, ಗೋಯೆಂಚೋ ಸ್ವಾಭಿಮಾನ್ ಪಾರ್ಟಿ, ಜೈ ಮಹಾಭಾರತ್ ಪಾರ್ಟಿ ಮತ್ತು ಸಂಭಾಜಿ ಬ್ರಿಗೇಡ್ ಕೂಡ ಚುನಾವಣಾ ಕಣದಲ್ಲಿವೆ.

2017ರ ಚುನಾವಣೆಯಲ್ಲಿ ಗೋವಾದಲ್ಲಿ ಶೇ.82.56ರಷ್ಟು ಮತದಾನವಾಗಿತ್ತು. ಆ ಸಮಯದಲ್ಲಿ ಕಾಂಗ್ರೆಸ್ 17 ಸ್ಥಾನಗಳನ್ನು ಗೆದ್ದಿತ್ತು, ಆದರೆ ಬಿಜೆಪಿ 13 ಸ್ಥಾನಗಳನ್ನು ಗಳಿಸಿತ್ತು. ಆದರೆ ಬಿಜೆಪಿಯು ರಾಜ್ಯದಲ್ಲಿ ಸರ್ಕಾರ ರಚಿಸಲು ಕೆಲವು ಪ್ರಾದೇಶಿಕ ಸಂಘಟನೆಗಳು ಮತ್ತು ಸ್ವತಂತ್ರರೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಉತ್ತರ ಪ್ರದೇಶದಲ್ಲಿ ಎರಡನೇ ಹಂತ:ಎರಡನೇ ಹಂತದ ಚುನಾವಣೆಯಲ್ಲಿಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ ಚುನಾವಣೆ ನಡೆಯಲಿರುವ 55 ಸ್ಥಾನಗಳ ಪೈಕಿ 2017ರಲ್ಲಿ ಬಿಜೆಪಿ 38ರಲ್ಲಿ ಗೆಲುವು ಸಾಧಿಸಿದ್ದರೆ, ಸಮಾಜವಾದಿ ಪಕ್ಷ 15 ಮತ್ತು ಕಾಂಗ್ರೆಸ್ 2 ಸ್ಥಾನಗಳನ್ನು ಗಳಿಸಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು.

ಈ ಹಂತದಲ್ಲಿ ಕಣದಲ್ಲಿರುವ ಪ್ರಮುಖರೆಂದರೆ, ಎಸ್‌ಪಿ ಸೇರ್ಪಡೆಗೊಂಡಿರುವ ಬಿಜೆಪಿ ರಾಜ್ಯ ಸಚಿವ ಧರಂ ಸಿಂಗ್ ಸೈನಿ ಹಾಗೂ ತಮ್ಮ ಭದ್ರಕೋಟೆಯಾದ ರಾಂಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಅಜಂ ಖಾನ್ ಆಗಿದ್ದಾರೆ. ಧರಂ ಸಿಂಗ್ ಸೈನಿ ಅವರು ನಕುದ್ ವಿಧಾನಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಇನ್ನುಳಿದಂತೆ ನಿರ್ಗಮಿತ ಜಲಶಕ್ತಿ ರಾಜ್ಯ ಸಚಿವ ಬಲದೇವ್ ಸಿಂಗ್ ಔಲಾಖ್ ಬಿಲಾಸ್‌ಪುರದಿಂದ, ನಗರಾಭಿವೃದ್ಧಿ ರಾಜ್ಯ ಸಚಿವ ಮಹೇಶ್ ಚಂದ್ರ ಗುಪ್ತಾ ಬದೌನ್‌ನಿಂದ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಗುಲಾಬ್ ದೇವಿ ಚಂಡೌಸಿಯಿಂದ ಕಣದಲ್ಲಿದ್ದಾರೆ. ಏಳು ಹಂತದ ಉತ್ತರ ಪ್ರದೇಶ ಚುನಾವಣೆಯ ಮೊದಲ ಸುತ್ತಿನ ಮತದಾನ ಫೆಬ್ರವರಿ 10ರಂದು ನಡೆದಿತ್ತು. ಚುನಾವಣೆ ನಡೆಯುವ ಎಲ್ಲಾ 5 ರಾಜ್ಯಗಳ ಫಲಿತಾಂಶವು ಮಾರ್ಚ್ 10 ರಂದು ಹೊರಬೀಳಲಿದೆ.

Last Updated : Feb 14, 2022, 6:39 AM IST

ABOUT THE AUTHOR

...view details