ನವದೆಹಲಿ:ಪಂಜಾಬ್ ವಿಧಾನಸಭೆಯ ಎಲ್ಲಾ 117 ಸ್ಥಾನಗಳಿಗೆ ಮತ್ತು ಉತ್ತರ ಪ್ರದೇಶದ 59 ವಿಧಾನಸಭಾ ಕ್ಷೇತ್ರಗಳಲ್ಲಿಂದು ರಾಜ್ಯದ ಮೂರನೇ ಹಂತದ ಮತದಾನ ನಡೆಯಲಿದೆ. ಎಲ್ಲ ಪಕ್ಷಗಳ ಹಿರಿಯ ನಾಯಕರು ಮತದಾರರನ್ನು ಸೆಳೆಯಲು ಶುಕ್ರವಾರ ಕೊನೆಯ ಹಂತದ ಕಸರತ್ತು ನಡೆಸಿದ್ದರು.
ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯುತ್ತಿದೆ. ಮೂರನೇ ಹಂತದಲ್ಲಿ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಈ ಹಂತದಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿಗೂ ಹೆಚ್ಚು ಜನರು ಮತದಾರರಿದ್ದಾರೆ.
ಯುಪಿಯ ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ ದೇಹತ್, ಕಾನ್ಪುರ ನಗರ, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಮತದಾನ ಜರುಗಲಿದೆ.
ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ಸ್ಪರ್ಧಿಸುತ್ತಿರುವ ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಭಾನುವಾರ ಈ ಹಂತದಲ್ಲಿ ಮತದಾನ ನಡೆಯಲಿದೆ. ಈ ಕ್ಷೇತ್ರದಿಂದ ಬಿಜೆಪಿಯು ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಾಘೇಲ್ ಅವರನ್ನು ಕಣಕ್ಕಿಳಿಸಿದೆ.