ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆ 2021ರ ಫಲಿತಾಂಶಗಳನ್ನು ‘ಎಲ್ಲಾ ಮತದಾನದ ಯುದ್ಧಗಳಿಗೆ ಮೂಲ’ ಎಂದೇ ಕರೆಯಲಾಗುತ್ತದೆ. ಕೊರೊನಾ ಸಂಕಷ್ಟ ಕಾಲದಲ್ಲೇ ನಡೆದಿರುವ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಮತಾ ಬ್ಯಾನರ್ಜಿ ನಡುವಿನ ಸಮರವೆಂದೇ ಪರಿಗಣಿಸಲ್ಪಟ್ಟಿರುವ ರಾಜ್ಯದ ರಿಸಲ್ಟ್ ತೀವ್ರ ಕುತೂಹಲ ಕೆರಳಿಸಿದೆ.
ಒಟ್ಟು ಎಂಟು ಹಂತಗಳಲ್ಲಿ ನಡೆದ ಚುನಾವಣೆಯಲ್ಲಿ ಟಿಎಂಪಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿಯೇ ನಡೆದಿತ್ತು. ಈ ಬಾರಿ ಉಭಯ ಪಕ್ಷಗಳ ನಡುವೆ ಸಮಬಲದ ಹೋರಾಟ ನಡೆದಿದ್ದು ಬಂಗಾಳ ದೀದಿಗೋ, ಮೋದಿಗೋ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.
ಟಿಎಂಸಿ, ಬಿಜೆಪಿ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ, ಕಾಂಗ್ರೆಸ್ ಮತ್ತು ಇಂಡಿಯನ್ ಸೆಕ್ಯುಲರ್ ಫ್ರಂಟ್ ಚುನಾವಣೆಯಲ್ಲಿ ಸ್ಪರ್ಧಿಸಿವೆ. ಆದ್ರೆ ಮುಖ್ಯವಾಗಿ ಕದನ ಏರ್ಪಟ್ಟಿದ್ದು ಬಿಜೆಪಿ ಮತ್ತು ಟಿಎಂಸಿ ನಡುವೆ ಮಾತ್ರ.
ಟಿಎಂಸಿ ಸೀಟುಗಳ ಸಂಖ್ಯೆ ಕುಸಿತ ಸಂಭವ
ಟೈಮ್ಸ್ ನೌ-ಸಿ-ವೋಟರ್ ನಡೆಸಿದ ಸಮೀಕ್ಷೆ ಅನ್ವಯ ತೃಣಮೂಲ ಅಧಿಕಾರ ಉಳಿಸಿಕೊಂಡರೆ, ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಅಸಾಧಾರಣ ಪಕ್ಷವಾಗಿ ಹೊರಹೊಮ್ಮಲಿದೆ. 2016ರ ಚುನಾವಣಾ ಫಲಿತಾಂಶಗಳಿಗೆ ಹೋಲಿಸಿದರೆ ಟಿಎಂಸಿಯ ಸೀಟು ಪಾಲು ತೀವ್ರವಾಗಿ ಕುಸಿಯುತ್ತದೆ. 294 ಸದಸ್ಯರ ವಿಧಾನಸಭೆಯಲ್ಲಿ ಆಡಳಿತ ಪಕ್ಷವು 158 ವಿಧಾನಸಭಾ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಬಿಜೆಪಿ ದೊಡ್ಡ ಪಕ್ಷವಾಗಿ 115 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ.
ಮಮತಾ vs ಸುವೇಂದು
ಟಿಎಂಸಿ ವರಿಷ್ಠ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ಪಕ್ಷದ ಮಾಜಿ ಸಹೋದ್ಯೋಗಿ ಮತ್ತು ಈಗ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿಯ ವಿರುದ್ಧ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ಹಾಗಾಗಿ ಈಗ ಎಲ್ಲರ ಚಿತ್ತ ನಂದಿಗ್ರಾಮ್ನತ್ತ ನೆಟ್ಟಿದೆ. ಚುನಾವಣೆಗೆ ಮುಂಚಿತವಾಗಿ, ನಂದಿಗ್ರಾಮಕ್ಕೆ ಪ್ರಬಲ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಅಧಿಕಾರಿಯು ಬ್ಯಾನರ್ಜಿಯನ್ನು 50,000 ಮತಗಳಿಂದ ಸೋಲಿಸುವ ಪ್ರತಿಜ್ಞೆ ಮಾಡಿದ್ದಾರೆ. ಒಂದು ವೇಳೆ ವಿಫಲವಾದರೆ ಅವರು ರಾಜಕೀಯ ತೊರೆಯುವುದಾಗಿ ಹೇಳಿದ್ದಾರೆ.