ಹೈದರಾಬಾದ್ (ತೆಲಂಗಾಣ):ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಅಂಜನಿ ಕುಮಾರ್ ಅವರನ್ನು ಚುನಾವಣಾ ಆಯೋಗವು ಅಮಾನತು ಮಾಡಿ ಆದೇಶಿಸಿದೆ. ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲೇ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ರೇವಂತ್ ರೆಡ್ಡಿ ಅವರನ್ನು ಡಿಜಿಪಿ ಸೇರಿದಂತೆ ಇತರ ಪೊಲೀಸ್ ಅಧಿಕಾರಿಗಳು ಭೇಟಿ ಮಾಡಿದ್ದರು.
ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಯ ಚುನಾವಣಾ ಫಲಿತಾಂಶ ಬಹುತೇಕ ಹೊರಬಂದಿದೆ. ಆಡಳಿತಾರೂಢ ಬಿಆರ್ಎಸ್ ವಿರುದ್ಧ ಕಾಂಗ್ರೆಸ್ ಗೆಲುವು ಸಾಧಿಸಿದೆ. ಕೈ ಪಡೆ 63 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಆರ್ಎಸ್ 40 ಸ್ಥಾನಗಳಿಗೆ ಕುಸಿದಿದೆ. ಬಿಜೆಪಿ 9 ಕ್ಷೇತ್ರ ಮತ್ತು ಎಐಎಂಐಎಂ 6 ಕ್ಷೇತ್ರ ಹಾಗೂ ಒಂದು ಕಡೆ ಸಿಪಿಐ ಮುನ್ನಡೆಯಲ್ಲಿದೆ.