ನವದೆಹಲಿ: ರಾಜಸ್ಥಾನ ವಿಧಾನಸಭಾ ಚುನಾವಣೆಯ ಮತದಾನ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಇಂದು ಪರಿಷ್ಕರಿಸಿದೆ. ನವೆಂಬರ್ 23ರ ಬದಲಿಗೆ 25ರಂದು ಮತದಾನ ನಡೆಯಲಿದೆ ಎಂದು ಘೋಷಿಸಿದೆ. ನವೆಂಬರ್ 25 ಶನಿವಾರ ಆಗಿದ್ದು, ಹೆಚ್ಚಿನ ಜನರು ಮತದಾನದಲ್ಲಿ ಭಾಗವಹಿಸಲಿ ಎಂಬ ಕಾರಣಕ್ಕೆ ದಿನಾಂಕ ಬದಲಾವಣೆ ಮಾಡಲಾಗಿದೆ.
ಅಕ್ಟೋಬರ್ 9ರಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ಮಿಜೋರಾಂ ಹಾಗೂ ತೆಲಂಗಾಣ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದ್ದರು. 200 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಗೆ ನೆವೆಂಬರ್ 23ರಂದು ಮತದಾನ ನಡೆಯಲಿದೆ ಎಂದು ಪ್ರಕಟಿಸಿದ್ದರು.
ದಿನಾಂಕ ಬದಲಿಗೆ ವಿವರಣೆ ಹೀಗಿದೆ...:''ಭಾರತೀಯ ಚುನಾವಣಾ ಆಯೋಗವು ಅ.9ರಂದು ಇತರ ರಾಜ್ಯಗಳ ಚುನಾವಣೆಯೊಂದಿಗೆ ರಾಜಸ್ಥಾನದ ಸಾರ್ವತ್ರಿಕ ಚುನಾವಣೆಗೆ ಮತದಾನವನ್ನು ನೆವೆಂಬರ್ 23ರ ಗುರುವಾರ ನಿಗದಿ ಮಾಡಿತ್ತು. ತರುವಾಯ ಆಯೋಗವು ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು ಮತ್ತು ವಿವಿಧ ಮಾಧ್ಯಮ ವೇದಿಕೆಗಳಲ್ಲಿ ಆ ದಿನ ದೊಡ್ಡ ಪ್ರಮಾಣದಲ್ಲಿ ಮದುವೆಗಳು ಹಾಗೂ ಸಾಮಾಜಿಕ ನಿಶ್ಚಿತಾರ್ಥಗಳು ನಿಗದಿಯಾಗಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯ ಜನರಿಗೆ ಅನಾನುಕೂಲತೆ ಉಂಟಾಗಲಿದೆ. ಮತದಾನದ ಸಮಯದಲ್ಲಿ ಕಡಿಮೆ ಮತದಾರರ ಭಾಗವಹಿಸುವಿಕೆಗೆ ಕಾರಣವಾಗಬಹುದು ಎಂದು ಮತದಾನದ ದಿನಾಂಕದ ಬದಲಿಗೆ ಮನವಿ ಸ್ವೀಕರಿತ್ತು. ಈ ಅಂಶಗಳನ್ನು ಆಯೋಗವು ಪರಿಗಣಿಸಿ ಮತದಾನದ ದಿನಾಂಕವನ್ನು ನವೆಂಬರ್ 23ರ (ಗುರುವಾರ) ಬದಲಿಗೆ ನವೆಂಬರ್ 25ಕ್ಕೆ (ಶನಿವಾರ) ಬದಲಾಯಿಸಲು ನಿರ್ಧರಿಸಲಾಗಿದೆ'' ಎಂದು ಕಾರ್ಯದರ್ಶಿ ಸಂಜೀವ್ ಕುಮಾರ್ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.