ರಾಂಚಿ(ಜಾರ್ಖಂಡ್): ಲಾಭದಾಯಕ ಹುದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ಸಿಎಂ ಹೇಮಂತ್ ಕುಮಾರ್ ಸೊರೆನ್ ಸದಸ್ಯತ್ವ ರದ್ದುಗೊಳಿಸುವಂತೆ ಚುನಾವಣಾ ಆಯೋಗ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.
ಸಿಎಂ ಹೇಮಂತ್ ಕುಮಾರ್ ಸೊರೆನ್ ಅವರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ ಎಂದು ಮಾಹಿತಿ ಹೊರ ಬಿದ್ದಿದೆ. ಈ ಸಂಬಂಧ ಚುನಾವಣಾ ಆಯೋಗ ರಾಜ್ಯಪಾಲರಿಗೆ ಪತ್ರ ಕೂಡಾ ಬರೆದಿದೆ. ಈ ಪತ್ರ ರಾಜಭವನಕ್ಕೆ ತಲುಪಿದೆ ಎನ್ನಲಾಗಿದೆ. ರಾಜ್ಯಪಾಲ ರಮೇಶ್ ಬೈಸ್ ಇಂದು ಮಧ್ಯಾಹ್ನ ದೆಹಲಿಯಿಂದ ರಾಂಚಿ ತಲುಪಲಿದ್ದಾರೆ. ರಾಂಚಿಗೆ ತಲುಪಿದ ನಂತರ ಅವರು ಯಾವುದೇ ಸಮಯದಲ್ಲಿ ಚುನಾವಣಾ ಆಯೋಗದ ಶಿಫಾರಸಿನ ಬಗ್ಗೆ ಕ್ರಮ ಕೈಗೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಇಂದು ಬೆಳಗ್ಗೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮಾಡಿರುವ ಟ್ವೀಟ್ ಜಾರ್ಖಂಡ್ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಚುನಾವಣಾ ಆಯೋಗದ ಪತ್ರ ರಾಜ್ಯಪಾಲರಿಗೆ ತಲುಪಿದೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ. ಮತ್ತೊಂದು ಕಡೆ ಈ ವಿಷಯವನ್ನು ಕಳೆದ ಫೆಬ್ರವರಿಯಲ್ಲಿ ಮಾಜಿ ಮುಖ್ಯಮಂತ್ರಿ ರಘುವರ್ ದಾಸ್ ಪ್ರಸ್ತಾಪಿಸಿದ್ದರು ಎಂಬುದು ಗಮನಾರ್ಹವಾಗಿದೆ. ಫೆ.11ರಂದು ರಾಜ್ಯಪಾಲರನ್ನು ಭೇಟಿ ಮಾಡಿದ್ದ ರಘುವರ್ ದಾಸ್ ಅವರು, ಹೇಮಂತ್ ಸೊರೆನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದ್ದರು.
ಅಷ್ಟೇ ಅಲ್ಲ ಅವರು ಲಾಭದಾಯಕ ಹುದ್ದೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಆಯೋಗ, ಮೊದಲು ಮುಖ್ಯ ಕಾರ್ಯದರ್ಶಿಯಿಂದ ದಾಖಲೆಗಳನ್ನು ಕೇಳಿತ್ತು. ಇದಾದ ಬಳಿಕ ಆಯೋಗದ ಎದುರು ವಾದ- ಪ್ರತಿವಾದಗಳು ಮಂಡನೆ ಆಗಿದ್ದವು.
ಇದನ್ನು ಓದಿ:ಆರ್ಜೆಡಿ ನಾಯಕರ ಮೇಲೆ ಸಿಬಿಐ ದಾಳಿ.. 200ಕ್ಕೂ ಹೆಚ್ಚು ಭೂ ದಾಖಲೆ, 20 ಕೆಜಿ ಚಿನ್ನ ವಶ